ಬೆಂಗಳೂರು: ಬೈಕ್, ಟ್ಯಾಕ್ಸಿ ಸೇವೆಗೆ ರಾಜ್ಯ ಮೋಟಾರು ವಾಹನ ಕಾಯ್ದೆಯಲ್ಲಿ ಅವಕಾಶ ಇಲ್ಲದಿದ್ದರೂ ಸರ್ಕಾರ ಹೊಸದಾಗಿ ಆದೇಶ ಹೊರಡಿಸಿ ಇವುಗಳ ಸೇವೆಗೆ ಅವಕಾಶ ನೀಡಲು ಮುಂದಾಗಿದೆ. ಇದರಿಂದ ಲಕ್ಷಾಂತರ ಆಟೋ ಮತ್ತು ಟ್ಯಾಕ್ಸಿ ಚಾಲಕರು ಬೀದಿಗೆ ಬೀಳಲಿದ್ದಾರೆ. ಹಾಗಾಗಿ ಇದಕ್ಕೆ ಅನುವು ಮಾಡಿ ಕೊಡಬಾರದು ಎಂದು ಓಲಾ, ಉಬರ್ ಚಾಲಕರ ಮತ್ತು ಮಾಲೀಕರ ಸಂಘದ ಸಂಸ್ಥಾಪಕ ಅಧ್ಯಕ್ಷ ತನ್ವೀರ್ ಪಾಷಾ ಒತ್ತಾಯಿಸಿದ್ದಾರೆ.
ಇಂದು ಕೆಎಚ್ ರಸ್ತೆ (ಡಬಲ್ ರೋಡ್)ಯಲ್ಲಿರುವ ಸಂಘಟನೆಯ ಮುಖ್ಯ ಕಚೇರಿಯಿಂದ 200ಕ್ಕೂ ಅಧಿಕ ಚಾಲಕರು ಹಾಗೂ ಸಂಘದ ಪದಾಧಿಕಾರಿಗಳು ಕಾಲ್ನಡಿಗೆ ಮೂಲಕ ತೆರಳಿ ಈ ಯೋಜನೆಯನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿ ಆಯುಕ್ತರಿಗೆ ಮನವಿ ಸಲ್ಲಿಸಿದರು. ಸರ್ಕಾರ ಯೋಜನೆಯನ್ನು ಹಿಂಪಡೆಯದಿದ್ದರೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಇದೇ ವೇಳೆ ಎಚ್ಚರಿಕೆ ರವಾನಿಸಿದರು.
![appeal letter](https://etvbharatimages.akamaized.net/etvbharat/prod-images/kn-bng-02-ola-uber-drivers-protest-bike-taxi-service-praposed-by-goverment-submitting-dissent-to-transport-comissioner-ka10032_22072021160734_2207f_1626950254_977.jpg)
ಹಲವಾರು ವರ್ಷಗಳಿಂದ ಓಲಾ, ಉಬರ್ ಸಂಸ್ಥೆಗಳು ಕಾನೂನು ಉಲ್ಲಂಘನೆ ಮಾಡುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದ ಅಧಿಕಾರಿಗಳು, ಇತ್ತೀಚಿನ ದಿನಗಳಲ್ಲಿ ಓಲಾ ಸಂಸ್ಥೆ ನಿಯಮ ಉಲ್ಲಂಘನೆ ಮಾಡುತ್ತಿದೆ ಎಂದು ಅಮಾಯಕ ಚಾಲಕರ ವಾಹನಗಳನ್ನು ಹಿಡಿದು ಅವರಿಗೆ ತೊಂದರೆ ನೀಡುತ್ತಿದೆ. ಇದನ್ನು ನಿಲ್ಲಿಸಬೇಕೆಂದು ಆಯುಕ್ತರಿಗೆ ಒತ್ತಾಯಿಸಿದ್ದೇವೆ ಎಂದು ಹೇಳಿದರು.
ಓದಿ; ವ್ಯಾಪಕ ಮಳೆಯಿಂದ ಭೂಕುಸಿತ, ಹೆದ್ದಾರಿ ಬಿರುಕು.. 4 ದಿನ ಶಿರಾಡಿ ಘಾಟ್ ರಸ್ತೆ ಬಂದ್!
ಬೇಕಾದರೆ ಓಲಾ ಸಂಸ್ಥೆಯ ಪರವಾನಗಿ ರದ್ದು ಮಾಡಲಿ. ಅದನ್ನು ಬಿಟ್ಟು ಬಡ ಚಾಲಕರ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ಎಷ್ಟು ಸರಿ ಎಂದು ಪ್ರಶ್ನಿಸಿದರು. ಬಡ ಚಾಲಕರಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಸರ್ಕಾರದ ಮತ್ತು ಪ್ರತಿಪಕ್ಷಗಳ ಗಮನ ಸೆಳೆಯಲು ಮಾಧ್ಯಮದವರು ಸಹಾಯ ಮಾಡಬೇಕೆಂದು ತನ್ವೀರ್ ಪಾಷಾ ವಿನಂತಿ ಮಾಡಿದರು.