ಬೆಂಗಳೂರು: ಕರ್ನಾಟಕದಲ್ಲೂ ಶಾಲಾ ಶುಲ್ಕ ನಿಯಂತ್ರಣ ಸಮಿತಿ ರಚನೆ ಬಗ್ಗೆ ಚರ್ಚೆ ನಡೆಸಲಾಗ್ತಿದೆ. ಈ ವೇಳೆ ಬೇರೆ ರಾಜ್ಯಗಳ ಶುಲ್ಕ ಮಾದರಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಕೊರೊನಾ ಕಾಲದಲ್ಲಿಯೂ ಖಾಸಗಿ ಶಾಲೆಗಳಿಂದ ಫೀಸ್ ಸುಲಿಗೆ ವಿರೋಧಿಸಿ ನಗರದ ಮೌರ್ಯ ಸರ್ಕಲ್ನಲ್ಲಿ ನೂರಾರು ಸಂಖ್ಯೆಯಲ್ಲಿ ಪೋಷಕರು ಕಳೆದ ಅಕ್ಟೋಬರ್ 2ರಂದು ಪ್ರತಿಭಟನೆ ನಡೆಸಿದ್ದರು. ದಿಢೀರ್ ಮಿಲಿಯೇನರ್ ಆಗಬೇಕಾ? ಶಾಲೆ ತೆರೆಯಿರಿ ಅಂತಾ ಘೋಷಣೆ ಕೂಗಿ, ಕಪ್ಪು ಪಟ್ಟಿ ಕಟ್ಟಿಕೊಂಡು ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಕರ್ನಾಟಕದಲ್ಲಿ ಶುಲ್ಕ ನಿಯಂತ್ರಣ ಹಾಗೂ ಮೇಲುಸ್ತುವಾರಿ ಆಯೋಗ ರೂಪಿಸಿ ಜಾರಿಗೊಳಿಸುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡಿದೆ.
ಹೀಗಾಗಿ, ಇದೀಗ ರಾಜ್ಯದಲ್ಲಿ ಶಾಲಾ ಶುಲ್ಕ ನಿಯಂತ್ರಣ ಸಮಿತಿ ರಚನೆ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಅಂತ ಶಿಕ್ಷಣ ಸಚಿವ ನಾಗೇಶ್ ತಿಳಿಸಿದ್ದಾರೆ. ಶುಲ್ಕ ನಿಯಂತ್ರಣ ಸಮಿತಿ ಮಾಡುವಂತೆ ಪೋಷಕರು ಮನವಿ ಮಾಡಿದ್ದಾರೆ. ತೆಲಂಗಾಣ ಹಾಗೂ ಬೇರೆ ರಾಜ್ಯಗಳಲ್ಲಿ ಶುಲ್ಕ ನಿಯಂತ್ರಣ ಸಮಿತಿ ಇದೆ. ಅದನ್ನ ನಮ್ಮ ರಾಜ್ಯದಲ್ಲೂ ತರುವಂತೆ ಪೋಷಕರು ಒತ್ತಡ ಹಾಕಿದ್ದಾರೆ.
ಈ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಅಲ್ಲದೇ ಬೇರೆ ರಾಜ್ಯಗಳಲ್ಲಿ ಯಾವ ಮಾದರಿಯಲ್ಲಿ ಶುಲ್ಕ ಇದೆ ಅನ್ನೋ ಮಾಹಿತಿ ತೆಗೆದುಕೊಳ್ಳಲು ಹೇಳಿದ್ದೇನೆ. ವರದಿ ನೋಡಿ ನಮ್ಮ ರಾಜ್ಯದಲ್ಲೂ ಶುಲ್ಕ ನಿಯಂತ್ರಣ ಸಮಿತಿ ರಚನೆ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಅಂತ ಸಚಿವ ಬಿ ಸಿ ನಾಗೇಶ್ ಅಭಯ ನೀಡಿದ್ದಾರೆ.