ಹೆಚ್ಚು ಕೇಸ್ಗಳಿರುವ ಪ್ರದೇಶದಲ್ಲಿ ಸೋಂಕು ಹರಡುವುದನ್ನು ನಿಯಂತ್ರಿಸಿ: ಮುಖ್ಯ ಆಯುಕ್ತ ಗೌರವ್ ಗುಪ್ತ - ಬೆಂಗಳೂರು ಕೋವಿಡ್ ವರದಿ
ಹೆಚ್ಚು ಕೋವಿಡ್ ಪ್ರಕರಣಗಳು ಕಂಡು ಬರುತ್ತಿರುವ ಪ್ರದೇಶದಲ್ಲಿ ಸೋಂಕು ಹರಡುವುದನ್ನು ನಿಯಂತ್ರಿಸಿ ಎಂದು ಅಧಿಕಾರಿಗಳಿಗೆ ಮುಖ್ಯ ಆಯುಕ್ತ ಗೌರವ್ ಗುಪ್ತ ಸೂಚಿಸಿದ್ದಾರೆ.
ಮುಖ್ಯ ಆಯುಕ್ತ ಗೌರವ್ ಗುಪ್ತ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆಯ ಪ್ರಮಾಣ ದಿನೇ ದಿನೆ ಇಳಿಕೆಯಾಗುತ್ತಿದ್ದು, ಹೆಚ್ಚು ಪ್ರಕರಣಗಳು ಕಂಡುಬರುತ್ತಿರುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕೋವಿಡ್ ಸೋಂಕು ಹರಡುವುದನ್ನು ನಿಯಂತ್ರಿಸಲು ಮುಖ್ಯ ಆಯುಕ್ತ ಗೌರವ್ ಗುಪ್ತ ಪಾಲಿಕೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ಕೋವಿಡ್ ಸೋಂಕು ನಿಯಂತ್ರಿಸುವ ಸಂಬಂಧ ಗುರುವಾರ ನಡೆದ ವರ್ಚುಯಲ್ ಸಭೆ ಉದ್ದೇಶಿಸಿ ಮಾತನಾಡಿ, ಪಾಲಿಕೆಯ ಎಲ್ಲ 8 ವಲಯಗಳಲ್ಲಿ ಕಳೆದ ವಾರದ ಕೇಸ್ ಟ್ರೆಂಡ್ ಅನ್ನು ಪರಿಶೀಲಿಸಲಾಗಿದ್ದು, ನಿತ್ಯದ ಕೋವಿಡ್ ಪ್ರಕರಣಗಳ ಸಂಖ್ಯೆಗಳಲ್ಲಿ ಸುಮಾರು ಶೇ.30 ರಷ್ಟು ಇಳಿಕೆ ಕಂಡಿದೆ. ಪಾಸಿಟಿವಿಟಿ ಪ್ರಮಾಣವು ಕೂಡಾ ಶೇ 25 ರಿಂದ ಶೇ 17 ರಿಂದ 20ಕ್ಕೆ ಇಳಿಕೆಯಾಗಿದೆ.
ಬಿಟಿಎಂ ಬಡಾವಣೆ, ಮಲ್ಲೇಶ್ವರ, ಹೆಚ್.ಎಸ್.ಆರ್ ಬಾಡಾವಣೆ, ಕೋಣನಕುಂಟೆ ವಾರ್ಡ್ಗಳಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳಿದ್ದು, ಈ ಪ್ರದೇಶಗಳಲ್ಲಿ ಕಟ್ಟುನಿಟ್ಟಾದ ಕಂಟೈನ್‌ಮೆಂಟ್ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅವತ್ತಿನ ದಿನವೇ ಫಿಸಿಕಲ್ ಟ್ರಯಾಜ್ : ಪಾಲಿಕೆಯ ಎಲ್ಲ ವಲಯಗಳಲ್ಲಿಯೂ ಆರ್.ಎ.ಟಿ ಮತ್ತು ಆರ್.ಟಿ.ಪಿ.ಸಿ.ಆರ್ ಪಾಸಿಟಿವಿಟಿ ದರ ಗಮನಿಸಬೇಕು. ಸಂಚಾರಿ ಟ್ರಯಾಜ್ ಘಟಕಗಳು(ಮೊಬೈಲ್ ಟ್ರಯಾಜ್ ಯುನಿಟ್ಸ್) ಒಟ್ಟಾರೆ ಪ್ರಕರಣ ಸಂಖ್ಯೆಯ ಶೇ 10 ರಿಂದ 15 ರಷ್ಟು ಟ್ರಯಾಜ್ ಮಾಡುವ ಬಗ್ಗೆ ಗಮನ ಹರಿಸಬೇಕು. ಜೊತೆಗೆ ಆಸ್ಪತ್ರೆ ಅಥವಾ ಕೋವಿಡ್ ಆರೈಕೆ ಕೇಂದ್ರಗಳಿಗೆ ಶಿಫಾರಸು ಮಾಡಿರುವ ಎಲ್ಲ ಪ್ರಕರಣಗಳನ್ನು ಅದೇ ದಿನ ಫಿಸಿಕಲ್ ಟ್ರಯಾಜ್ ಮಾಡಬೇಕು ಎಂದು ವಲಯಾಧಿಕಾರಿಗಳಿಗೆ ನಿರ್ದೇಶಿಸಿದರು.
ಓದಿ: ವರ್ಷದ ಹೆಣ್ಣು ಮಗುವಿನ ಮೇಲೆ 30 ವರ್ಷದ ಕಾಮುಕನಿಂದ ಅತ್ಯಾಚಾರ ಯತ್ನ!
ಸಿಬ್ಬಂದಿ ಮರುಹಂಚಿಕೆ ಮಾಡಿ: ನಗರದಲ್ಲಿ ಅವಶ್ಯಕತೆಗನುಗುಣವಾಗಿ ಆಯಾ ವಲಯ ವ್ಯಾಪ್ತಿಯಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ ಬಹುತೇಕ ಕೋವಿಡ್ ಸೋಂಕಿತರು ಹೋಮ್ ಐಸೋಲೇಷನ್ ನಲ್ಲಿದ್ದು, ಕೆಲವು ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಮಾತ್ರ ಆರೈಕೆ ಪಡೆಯುತ್ತಿದ್ದಾರೆ. ಈ ಪೈಕಿ ಇದುವರೆಗೆ ಚಿಕಿತ್ಸೆ ಪಡೆಯಲು ಬಾರದ ಕೋವಿಡ್ ಆರೈಕೆ ಕೇಂದ್ರಗಳಿಗೆ ನಿಯೋಜನೆ ಮಾಡಿರುವ ಸಿಬ್ಬಂದಿ ಮರು ಹಂಚಿಕೆ ಮಾಡಲು ಅಧಿಕಾರಿಗಳಿಗೆ ಹೇಳಿದರು.
ಪ್ರತಿನಿತ್ಯ ಪರಿಶೀಲನೆ ನಡೆಸಿ: ನಗರದಲ್ಲಿ ಕೋವಿಡ್ ಲಸಿಕೆ ನೀಡುವುದನ್ನು ನಾಲ್ಕು ವರ್ಗ(ಮೊದಲನೇ ಡೋಸ್, ಎರಡನೇ ಡೋಸ್, 15 ರಿಂದ 17 ವಯಸ್ಸಿನವರು ಮತ್ತು ಮುನ್ನೆಚ್ಚರಿಕಾ ಡೋಸ್)ಗಳಾಗಿ ಮಾಡಿಕೊಂಡು, ಶೇ 100 ರಷ್ಟು ಲಸಿಕಾಕರಣ ಆಗುವಂತೆ ಅಗತ್ಯ ಕ್ರಮವಹಿಸಬೇಕು. ಈ ಪೈಕಿ ವಲಯ ಸಂಯೋಜಕರು ನಿತ್ಯ ಪರಿಶೀಲನೆ ನಡೆಸಬೇಕು ಎಂದರು.
ಸಭೆಯಲ್ಲಿ ರಾಜ್ಯ ಕೋವಿಡ್ ವಾರ್ ರೂಂನ ಮುಖ್ಯಸ್ಥರು, ಕುಟುಂಬ ಮತ್ತು ಆರೋಗ್ಯ ಕಲ್ಯಾಣ ಇಲಾಖೆಯ ಆಯುಕ್ತರು, ಸಿ.ಹೆಚ್.ಬಿ.ಎಂ.ಎಸ್‌ನ ಮುಖ್ಯಸ್ಥರನ್ನೊಳಗೊಂಡ ತಂಡ, ಹೋಮ್ ಐಸೋಲೇಷನ್ ನ ಮುಖ್ಯಸ್ಥರು, ಎಲ್ಲ ವಲಯ ಆಯುಕ್ತರು, ಎಲ್ಲ ವಲಯ ಸಂಯೋಜಕರು, ಎಲ್ಲ ವಲಯ ಜಂಟಿ ಆಯುಕ್ತರು, ವಲಯ ಆರೋಗ್ಯಾಧಿಕಾರಿಗಳು, ಪಾಲಿಕೆ ಕೇಂದ್ರ ವಾರ್ ರೂಮ್ ತಂಡ ಹಾಗೂ ಇನ್ನಿತರ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ