ಬೆಂಗಳೂರು : ದಯಾನಂದ ಸಾಗರ್ ಶೈಕ್ಷಣಿಕ ಸಂಸ್ಥೆಗಳ ನೌಕರರಿಗೆ ಸರ್ಕಾರಿ ನೌಕರರಿಗೆ ಸರಿಸಮಾನ ವೇತನ ನೀಡುವ ಕುರಿತ ಮನವಿ ಪರಿಗಣಿಸಲು ಎರಡು ವರ್ಷ ವಿಳಂಬ ಮಾಡಿದ ಪ್ರಕರಣದಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಅವರು ಹೈಕೋರ್ಟ್‌ಗೆ 50 ಸಾವಿರ ರೂಪಾಯಿ ದಂಡ ಪಾವತಿ ಮಾಡಿದ್ದಾರೆ. ದಯಾನಂದ ಸಾಗರ್ ಶೈಕ್ಷಣಿಕ ಸಂಸ್ಥೆಗಳ ನೌಕರರ ಮನವಿ ಪರಿಗಣಿಸಲು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, 2020ರ ಮಾರ್ಚ್ 11ರಂದು ನೀಡಿದ ಆದೇಶ ಪಾಲಿಸಿಲ್ಲ ಎಂದು ಆಕ್ಷೇಪಿಸಿ ದಯಾನಂದ ಸಾಗರ ಕಾಲೇಜ್ ಆಫ್ ಎಂಜಿನಿಯರಿಂಗ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಲ್. ಹರ್ಷ ಎಂಬುವರು ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ಮತ್ತು ನ್ಯಾಯಮೂರ್ತಿ ಹೇಮಲೇಖ ಅವರಿದ್ದ ವಿಭಾಗೀಯ ನ್ಯಾಯಪೀಠ, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಅವರಿಗೆ 50 ಸಾವಿರ ರೂಪಾಯಿ ದಂಡ ವಿಧಿಸಿತ್ತು. ದಂಡದ ಮೊತ್ತವನ್ನು 15 ದಿನಗಳಲ್ಲಿ ಪಾವತಿಸಬೇಕು. ತಪ್ಪಿದಲ್ಲಿ ನ್ಯಾಯಾಂಗ ನಿಂದನೆ ಆರೋಪದ ಅಡಿ ಕ್ರಮ ಜರುಗಿಸಬೇಕಾಗುತ್ತದೆ ಎಂದು 2022ರ ನವೆಂಬರ್ 8ರಂದು ಆದೇಶ ನೀಡಲಾಗಿತ್ತು.
ಇದನ್ನೂ ಓದಿ: ಈಜಿಪುರ ವಸತಿ ಸಮುಚ್ಛಯ ಕಾಮಗಾರಿ ವಿಳಂಬ: ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ ಸರ್ಕಾರ
ಈ ಆದೇಶದ ಪಾಲನೆಯ ಹಿನ್ನೆಲೆಯಲ್ಲಿ ರಶ್ಮಿ ಮಹೇಶ್ ಅವರು ತಮ್ಮ ಸ್ವಂತ ಹಣದಲ್ಲಿ 50 ಸಾವಿರ ರೂಪಾಯಿ ಪಾವತಿ ಮಾಡಿದ್ದಾರೆ. ಅದನ್ನು ಪರಿಗಣಿಸಿದ ವಿಭಾಗೀಯ ಪೀಠ, ರಶ್ಮಿ ಮಹೇಶ್ ಮತ್ತು ರಾಜ್ಯ ಉನ್ನತ ಶಿಕ್ಷಣ ಇಲಾಖೆ ಮೇಲಿನ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಕೈಬಿಟ್ಟಿದೆ.
ಪ್ರಕರಣದ ಹಿನ್ನೆಲೆ ಏನು ? : ರಾಜ್ಯ ಸರ್ಕಾರಿ ನೌಕರರಿಗೆ ಸರಿಸಮನಾಗಿ ತಮಗೂ ವೇತನ ಹಾಗೂ ಸೌಲಭ್ಯ ವಿಸ್ತರಿಸಲು ನಿರ್ದೇಶಿಸಬೇಕು ಎಂದು ಕೋರಿ ದಯಾನಂದ ಸಾಗರ ಶಿಕ್ಷಣ ಸಂಸ್ಥೆಗಳ 37 ಬೋಧಕೇತರ ಕಾಯಂ ನೌಕರರು 2019ರಲ್ಲಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಉನ್ನತ ಶಿಕ್ಷಣ ಇಲಾಖೆಯ ಮರು ಪರಿಶೀಲನಾ ಪ್ರಾಧಿಕಾರ (ಇಲಾಖೆ ಪ್ರಧಾನ ಕಾರ್ಯದರ್ಶಿ) ಅರ್ಜಿದಾರ ನೌಕರರ ಮನವಿಯನ್ನು ಕರ್ನಾಟಕ ಶಿಕ್ಷಣ ಕಾಯ್ದೆ - 1982ರ ಅಡಿ ಪುನರ್ ವಿಮರ್ಶೆ ಮಾಡಿ ನಾಲ್ಕು ತಿಂಗಳಲ್ಲಿ ಸೂಕ್ತ ಆದೇಶ ಹೊರಡಿಸಬೇಕು ಎಂದು 2020ರ ಮಾರ್ಚ್ 3ರಂದು ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠವು ಈ ಆದೇಶ ಮಾಡಿತ್ತು.
ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಲ್. ಹರ್ಷ ಅವರು 2021ರ ಡಿಸೆಂಬರ್ ತಿಂಗಳಿನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿ, ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠದ ಆದೇಶವನ್ನು ಮರು ಪರಿಶೀಲನಾ ಪ್ರಾಧಿಕಾರ ಪಾಲಿಸಿಲ್ಲ ಎಂದು ಆರೋಪಿಸಿದ್ದರು. ಇದರಿಂದ ವಿಭಾಗೀಯ ಪೀಠವು ಮರು ಪರಿಶೀಲನಾ ಪ್ರಾಧಿಕಾರದ ಅಧಿಕಾರಿಯಾದ ರಶ್ಮಿ ಮಹೇಶ್ ಅವರಿಗೆ 50 ಸಾವಿರ ರೂಪಾಯಿ ದಂಡ ವಿಧಿಸಿತ್ತು.
ಇದನ್ನೂ ಓದಿ: ಖಾಸಗಿ ವ್ಯಕ್ತಿಯ ಜಮೀನಿನಲ್ಲಿ ಬಡಾವಣೆ ನಿರ್ಮಾಣ: ಪರ್ಯಾಯ ಭೂಮಿ, 5 ಲಕ್ಷ ಪರಿಹಾರ ನೀಡುವಂತೆ ಬಿಡಿಎಗೆ ಹೈಕೋರ್ಟ್ ಸೂಚನೆ