ಬೆಂಗಳೂರು : ಆಕ್ಷೇಪಾರ್ಹ ಪದ ಬಳಕೆ ಆರೋಪದಲ್ಲಿ ರಾಜ್ಯ ತೋಟಗಾರಿಕಾ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ವಿರುದ್ಧ ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ದಿವಾಕರ್ ಎಂಬವರು ನೀಡಿದ ದೂರಿನ ಮೇರೆಗೆ ಸಚಿವರ ವಿರುದ್ಧ ಗಂಭೀರವಲ್ಲದ ಅಪರಾಧ ಪ್ರಕರಣ (ಎನ್‌ಸಿಆರ್) ದಾಖಲಾಗಿದೆ. ಸಂದರ್ಶನವೊಂದರಲ್ಲಿ ಮಾತನಾಡುವಾಗ ಸಚಿವರು ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು ಎನ್ನಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪೊಲೀಸರಿಗೆ ನೀಡಲಾಗಿದೆ.
ಸಚಿವರು ಮಾತನಾಡಿರುವ ಸ್ಥಳ ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯಾಗಿದ್ದು, ಪ್ರಕರಣವನ್ನು ರಾಜಾಜಿನಗರ ಪೊಲೀಸರು ವಿಧಾನಸೌಧ ಠಾಣೆಗೆ ವರ್ಗಾಯಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಸಚಿವ ಮಲ್ಲಿಕಾರ್ಜುನ್ ಸ್ಪಷ್ಟನೆ : ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಸಚಿವರು ಸ್ಪಷ್ಟನೆ ನೀಡಿದ್ದಾರೆ. ವಿಡಿಯೋದಲ್ಲಿ ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ತಿಳಿಸಿದ್ದಾರೆ.
ಇಂದು ದಾವಣಗೆರೆಯಲ್ಲಿ ಸ್ವಾತಂತ್ರೋತ್ಸವ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಸುದ್ದಿಗಾರೊಂದಿಗೆ ಮಾತನಾಡಿ, "ಉಪೇಂದ್ರ ಅವರ ಪ್ರಕರಣದ ಬಗ್ಗೆ ನನಗೆ ಗೊತ್ತಿಲ್ಲ. ನಾನು ಆ ರೀತಿಯ ಪದ ಬಳಕೆಯನ್ನು ನಾನು ಮಾಡಿಲ್ಲ. ಒಳ್ಳೆದು ಮಾಡಿ, ಹೊಲಸು ಮಾಡಬೇಡಿ ಎಂದು ಹೇಳಿದ್ದೇನೆ ಅಷ್ಟೇ, ಅದನ್ನು ಈ ರೀತಿ ತಿರುಚಲಾಗಿದೆ" ಎಂದು ಹೇಳಿದ್ದರು.
ಉಪೇಂದ್ರ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಆರೋಪ : ಇತ್ತೀಚೆಗೆ ನಟ, ನಿರ್ದೇಶಕ ಉಪೇಂದ್ರ ಅವರು ತಮ್ಮ ಸಾಮಾಜಿಕ ಜಾಲತಾಣದ ಲೈವ್ನಲ್ಲಿ ಮಾತನಾಡುವ ವೇಳೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಎಫ್ಐಆರ್ ದಾಖಲಾಗಿತ್ತು. ಜಾತಿಯೊಂದರ ಭಾವನೆಗಳಿಗೆ ಧಕ್ಕೆ ಉಂಟಾಗುವ ಪದ ಬಳಸಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಧುಸೂದನ್ ಎಂಬವರು ದೂರು ಸಲ್ಲಿಸಿದ್ದರು.
ಇದರ ಬೆನ್ನಲ್ಲೇ ಉಪೇಂದ್ರ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿತ್ತು. ತಮ್ಮ ವಿರುದ್ಧ ದಾಖಲಾದ ಎಫ್ಐಆರ್ ರದ್ದತಿ ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಎಫ್ಐಆರ್ಗೆ ತಡೆ ನೀಡಿ ಆದೇಶಿಸಿತ್ತು. ಆಕ್ಷೇಪಾರ್ಹ ಪದ ಬಳಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಉಪೇಂದ್ರ ಕ್ಷಮೆಯಾಚನೆ ಮಾಡಿದ್ದರು.
ಇದನ್ನೂ ಓದಿ : 'ದ್ವೇಷದ ಆಟಕ್ಕೆ ತಡೆ ಹಿಡಿದ ಹೈಕೋರ್ಟ್ ನಡೆ'.. FIR ತಡೆಗೆ ಉಪೇಂದ್ರ ಟ್ವೀಟ್