ಬೆಂಗಳೂರು : ಮಕ್ಕಳು ನಿರಂತರವಾಗಿ ಓದುವುದರಲ್ಲಿ ಮತ್ತು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗಲೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯಾದ್ಯಂತ 'ಓದುವ ಬೆಳಕು' ಎಂಬ ವಿನೂತನ ಕಾರ್ಯಕ್ರಮವನ್ನು ಶುರು ಮಾಡಿದೆ. ಶಾಲಾ ಮಕ್ಕಳನ್ನು ವಿಶೇಷವಾಗಿ ಗ್ರಾಮೀಣ ಮಕ್ಕಳನ್ನು ವ್ಯವಸ್ಥಿತವಾಗಿ ಕಲಿಕಾ ಕ್ಷೇತ್ರಕ್ಕೆ ತರುವ ಹಾಗೂ ನಿರಂತರತೆಯನ್ನು ಕಾಪಾಡುವ ಗುರಿ ಇದೆ ಎಂದು ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಶನಿವಾರ ಹೇಳಿದ್ದಾರೆ.
ಗ್ರಂಥಾಲಯಗಳನ್ನು ಗ್ರಾಮೀಣ ಅರಿವು ಕೇಂದ್ರಗಳನ್ನಾಗಿಸಲು ಗ್ರಂಥಾಲಯಗಳ ನವೀಕರಣ, ಡಿಜಿಟಲೀಕರಣ ಸೇರಿದಂತೆ ವಿವಿಧ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಸಚಿವರು, 'ಓದುವ ಬೆಳಕು' ಕಾರ್ಯಕ್ರಮದಡಿ ಗ್ರಾಮ ಪಂಚಾಯತ್ ಗ್ರಂಥಾಲಯಗಳಲ್ಲಿ ಹಲವಾರು ಅಭಿಯಾನಗಳ ಮೂಲಕ ಪ್ರತಿ ತಿಂಗಳು ಉಪಯುಕ್ತ ಚಟುವಟಿಕೆಯನ್ನು ಆಯೋಜಿಸುವುದರೊಂದಿಗೆ ಗ್ರಂಥಾಲಯಗಳನ್ನು ಸದುಪಯೋಗಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಗ್ರಂಥಾಲಯಕ್ಕೆ ಭೇಟಿ ನೀಡುವ ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಉತ್ತೇಜಿಸಲು 2023ರ ಸೆಪ್ಟೆಂಬರ್ ತಿಂಗಳಲ್ಲಿ 'ನಾನು ಓದುವ ಪುಸ್ತಕ' ಅಭಿಯಾನ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವ ಮಕ್ಕಳ ಹೆಸರನ್ನು ಗ್ರಾಮ ಪಂಚಾಯತ್ ಗ್ರಂಥಾಲಯಗಳಲ್ಲಿ ಪ್ರದರ್ಶಿಸಲಾಗುತ್ತದೆ. ಗ್ರಂಥಾಲಯಕ್ಕೆ ಭೇಟಿ ನೀಡುವ ಮಕ್ಕಳು ಪುಸ್ತಕ ಓದಲು ಗ್ರಂಥಾಲಯದ ಮೇಲ್ವಿಚಾರಕರು ಪ್ರೋತ್ಸಾಹಿಸುತ್ತಾರೆ. ಪುಸ್ತಕ ಓದಿ ಮುಗಿಸಿದ ನಂತರ ತಾವು ಓದಿದ ಪುಸ್ತಕಗಳ ಬಗ್ಗೆ ಸೂಚನೆಗಳಂತೆ ಮಾಹಿತಿ ಒದಗಿಸಬೇಕು. ಮಕ್ಕಳು ಓದಿದ ಪುಸ್ತಕಗಳ ಸಂಖ್ಯೆಯನ್ನು ಗ್ರಂಥಾಲಯದಲ್ಲಿ ಪ್ರದರ್ಶಿಸಲಾಗುವುದು ಎಂದರು.
ಇದನ್ನೂ ಓದಿ : ಬೆಳಕು ಕಾಣದ ಇವರ ಬದುಕೇ ' ಬುಡ್ಡಿದೀಪ '.. ' ಪವರ್ 'ಫುಲ್ ಸಚಿವರ ತವರಿನಲ್ಲೇ ಕತ್ತಲು..
ಸೆಪ್ಟೆಂಬರ್‌ನಲ್ಲಿ ಹೆಚ್ಚು ಪುಸ್ತಕಗಳನ್ನು ಓದಿದ ಮಕ್ಕಳ ಹೆಸರುಗಳನ್ನು ತಿಂಗಳ ಕೊನೆಯ ದಿನದಂದು ಘೋಷಿಸಲಾಗುತ್ತದೆ ಎಂದು ಹೇಳಿರುವ ಖರ್ಗೆ, ಗ್ರಾಮೀಣ ಮಕ್ಕಳು ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದ್ದಾರೆ.
ಇದನ್ನೂ ಓದಿ : ಶಾಲಾ ಮಕ್ಕಳ ಓದುವಿಕೆಯ ಸಾಮರ್ಥ್ಯ ಮಟ್ಟದಲ್ಲಿ ಕುಸಿತ : ಅಧ್ಯಯನ ವರದಿ
ಏನಿದು ಓದುವ ಬೆಳಕು ಅಭಿಯಾನ?: ಇದು 6 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಗ್ರಾಮೀಣ ಗ್ರಂಥಾಲಯ ಸದಸ್ಯತ್ವವನ್ನು ಉಚಿತವಾಗಿ ನೀಡುವುದಾಗಿದೆ. ಗ್ರಾಮೀಣ ಸಾರ್ವಜನಿಕ ಗ್ರಂಥಾಲಯಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಮಕ್ಕಳಲ್ಲಿ ಓದುವ ಅಭ್ಯಾಸವನ್ನು ಹೆಚ್ಚಿಸುವ ಸಲುವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು (RDPR) ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ ಪ್ರಾರಂಭಿಸಿದ ಕಾರ್ಯಕ್ರಮ. ಈ ಮೂಲಕ ಅಗತ್ಯವಿರುವ ಗ್ರಾಮೀಣ ಗ್ರಂಥಾಲಯಗಳಿಗೆ ವಿದ್ಯುತ್ ಸಂಪರ್ಕ, ಪುಸ್ತಕ ವಿತರಣೆ, ಪೀಠೋಪಕರಣಗಳು, ಓದುವ ಕೊಠಡಿಗಳು ಅಥವಾ ಬಾಲ್ಕನಿಗಳು, ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಮೇಜು, ಕುರ್ಚಿಗಳನ್ನು ಒದಗಿಸಲಾಗುತ್ತದೆ.
ಇದನ್ನೂ ಓದಿ : ಮದುವೆ ಅಲ್ಲ, ಮುಂಜಿ ಇಲ್ಲ... ಆದರೂ ಮೊಳಗಿತು ಮಂಗಳವಾದ್ಯ...!