ಬೆಂಗಳೂರು : ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ (ಬಯಪಾ)ದ ಲೆಕ್ಕ ಪರಿಶೋಧನಾ ವರದಿಯಲ್ಲಿ ಬರೋಬ್ಬರಿ 104.27 ಕೋಟಿ ರೂ. ಮೊತ್ತಕ್ಕೆ ಆಕ್ಷೇಪಣೆ ವ್ಯಕ್ತವಾಗಿದೆ.
ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ಆರ್ಥಿಕ ವ್ಯವಹಾರಗಳಲ್ಲಿ ಕೋಟ್ಯಂತರ ರೂ. ಮೊತ್ತದ ಲೋಪದೋಷ, ತಪ್ಪುಗಳಾಗಿರುವ ಬಗ್ಗೆ ಲೆಕ್ಕಪರಿಶೋಧನಾ ವರದಿ ಹೇಳಿದೆ. ಇತ್ತೀಚೆಗೆ ಸಲ್ಲಿಕೆಯಾದ 2018-2019ರ ಲೆಕ್ಕಪರಿಶೋಧನಾ ವರದಿಯ ಪ್ರಕಾರ ಬಯಪಾದಲ್ಲಿ 104.27 ಕೋಟಿ ರೂ. ಮೊತ್ತದ ವಹಿವಾಟಿನಲ್ಲಿ ಅನೇಕ ಲೋಪದೋಷಗಳು ಪತ್ತೆಯಾಗಿವೆ.
ಬರೋಬ್ಬರಿ 104.27 ಕೋಟಿ ರೂ. ಮೊತ್ತಕ್ಕೆ ಆಕ್ಷೇಪಣೆ ವ್ಯಕ್ತವಾಗಿದೆ. ಕೆರೆಗಳ ಪುನಶ್ಚೇತನ ಶುಲ್ಕ ವಸೂಲಿ ಮೊತ್ತ, ಬಡಾವಣೆ ನಕ್ಷೆ ಅನುಮೋದನೆ ನೀಡುವಾಗ ಕಡಿಮೆ ಬೆಟರ್ಮೆಂಟ್ ಶುಲ್ಕ ವಸೂಲಿ ಹಾಗೂ ಬಯಪಾ ಬಜೆಟ್‌ಗೆ ಅನುಮೋದನೆ ಪಡೆಯದೇ ಇರುವುದು, ಸಿಎ ನಿವೇಶನ ವಿವರಗಳನ್ನು ಹೊಂದಿರುವ ರಿಜಿಸ್ಟರ್ ಬುಕ್ ನಿರ್ವಹಿಸದೇ ಇರುವ ಬಗ್ಗೆ ಲೆಕ್ಕಪರಿಶೋಧನಾ ವರದಿಯಲ್ಲಿ ಆಕ್ಷೇಪಣೆ ಸಲ್ಲಿಸಲಾಗಿದೆ. ಬಯಪಾದ ಲೆಕ್ಕಪರಿಶೋಧನಾ ವರದಿ ಪ್ರತಿ ಈಟಿವಿ ಭಾರತ್‌ಗೆ ಲಭ್ಯವಾಗಿದೆ. ಆಡಿಟ್ ರಿಪೋರ್ಟ್‌ನಲ್ಲಿ ವ್ಯಕ್ತಪಡಿಸಲಾದ ಆಕ್ಷೇಪಣೆಗಳ ಸಮಗ್ರ ವರದಿ ಇಲ್ಲಿದೆ.
![ಬಯಪಾ ವರದಿ](https://etvbharatimages.akamaized.net/etvbharat/prod-images/kn-bng-02-biaapalapses-auditreport-script-7201951_04102020203335_0410f_1601823815_594.jpg)
ಕೆರೆಗಳ ಪುನಶ್ಚೇತನ ಶುಲ್ಕದಲ್ಲಿನ ಲೋಪ: 2018-19ನೇ ಸಾಲಿನಲ್ಲಿ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಅಭಿವೃದ್ಧಿ ನಕ್ಷೆ ಅನುಮೋದನೆ ನೀಡುವಾಗ ಖಾಸಗಿ ವಿನ್ಯಾಸ ಮಾಲೀಕರಿಂದ ಕೆರೆಗಳ ಪುನಶ್ಚೇತನ ಶುಲ್ಕ ರೂಪದಲ್ಲಿ ಪ್ರತಿ ಎಕರೆಗೆ 1 ಲಕ್ಷ ರೂ.ನಂತೆ ವಸೂಲಿಯಾಗಿದೆ. ಅದರಂತೆ 2019ರವರೆಗೆ ಒಟ್ಟು 8 ಕೆರೆಗಳ ಅಭಿವೃದ್ಧಿಗಾಗಿ 95.42 ಕೋಟಿ ರೂ. ವಸೂಲಿಯಾಗಿದೆ.
2018-19ರಲ್ಲಿ ಸ್ವೀಕರಿಸಿರುವ 2.64 ಕೋಟಿ ರೂ. ಕೆರೆ ಪುನಶ್ಚೇತನ ಶುಲ್ಕ ವಸೂಲಿಯಾಗಿದೆ. ಅದಕ್ಕನುಗುಣವಾಗಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿಲ್ಲ. ಈ ಮೊತ್ತಕ್ಕೆ ಯಾವುದೇ ವೆಚ್ಚಗಳನ್ನು ಕೈಗೊಂಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ. ಕೇವಲ ₹83.32 ಲಕ್ಷ ಕೆರೆಗಳ ಅಭಿವೃದ್ಧಿಗಾಗಿ ಸಣ್ಣ ನೀರಾವರಿ ಇಲಾಖೆಗೆ ಬಿಡುಗಡೆ ಮಾಡಲಾಗಿದೆ. ಉಳಿದಿರುವ 1.80 ಕೋಟಿ ರೂ. ಮೊತ್ತಕ್ಕೆ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಲಾಗಿದೆ. ಅಲ್ಲಿಯವರೆಗೆ ಆ ಮೊತ್ತವನ್ನು ಆಕ್ಷೇಪಣೆಯಲ್ಲಿಡಲು ಲೆಕ್ಕಪರಿಶೋಧನಾ ವರದಿಯಲ್ಲಿ ಸೂಚಿಸಲಾಗಿದೆ.
![ಬಯಪಾ ವರದಿ](https://etvbharatimages.akamaized.net/etvbharat/prod-images/kn-bng-02-biaapalapses-auditreport-script-7201951_04102020203335_0410f_1601823815_121.jpg)
ಬೆಟರ್ಮೆಂಟ್ ಶುಲ್ಕ ವಸೂಲಿಯಲ್ಲಿ ನಷ್ಟ: ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಪರಿವರ್ತಿತ ಭೂಮಿಯಲ್ಲಿ ಅಭಿವೃದ್ಧಿದಾರರಿಂದ ಬಡಾವಣೆ ಅಭಿವೃದ್ಧಿಗೊಳಿಸಲು ತಗಲುವ ವಾಸ್ತವಿಕ ವಿವರಗಳನ್ನು ಪಡೆಯದೆ ಬಡಾವಣೆ ನಕ್ಷೆಗೆ ಅನುಮೋದನೆ ನೀಡಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಭೂಮಿಯ ಮೌಲ್ಯ ಮತ್ತು ಅಭಿವೃದ್ಧಿಗೆ ತಗಲುವ ವೆಚ್ಚವನ್ನು ಪರಿಗಣಿಸಿ ಆಯಾ ಸಾಲಿನ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯನ್ನು ಆಧರಿಸಿ ನಿವೇಶನಗಳ ಮೌಲ್ಯ ನಿರ್ಧರಣೆ ಲೆಕ್ಕಾಚಾರ ಮಾಡಬೇಕು. ಅದರಿಂದ ಭೂಮಿಯ ಮೌಲ್ಯ ಮತ್ತು ಭೂ ಅಭಿವೃದ್ಧಿ ವೆಚ್ಚ ಕಳೆದು ಉಳಿದ ಮೊತ್ತವು ಭೂಮಿಯ ಬೆಟರ್ಮೆಂಟ್ ಶುಲ್ಕವಾಗಿರುತ್ತದೆ.
ಪ್ರಾಧಿಕಾರವು 27/11/1997ರಲ್ಲಿನ ಸುತ್ತೋಲೆಯಲ್ಲಿನ ದರಗಳನ್ನು ವಿಧಿಸುತ್ತಾ ಬಂದಿದ್ದು, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆಯ ನಿಯಮಾವಳಿಯನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿದೆ. ಈ ಕಾರಣದಿಂದಾಗಿ ಪ್ರಾಧಿಕಾರಕ್ಕೆ ಕೋಟ್ಯಂತರ ರೂ. ನಷ್ಟವಾಗಿರುವುದು ಲೆಕ್ಕ ಪರಿಶೋಧನೆಯಲ್ಲಿ ಕಂಡು ಬಂದಿದೆ.
ಹಳೆಯ ದರವನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ಭೂಮಿಯ ಮೌಲ್ಯವರ್ಧನೆಗೆ ಅನುಗುಣವಾಗಿ ಆಯಾ ವರ್ಷದ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯನ್ನು ಅನುಸರಿಸಿ ಬೆಟರ್ಮೆಂಟ್ ಶುಲ್ಕ ದರವನ್ನು ಪರಿಷ್ಕರಣೆ ಮಾಡಿಲ್ಲ. ಜೊತೆಗೆ ಸರ್ಕಾರದ ಗಮನ ಸೆಳೆದು ಪರಿಷ್ಕೃತ ದರ ನಿಗದಿ ಮಾಡಿ ಅನುಮೋದನೆ ಪಡೆಯುವಲ್ಲಿಯೂ ಯಾವುದೇ ಕ್ರಮ ವಹಿಸಿಲ್ಲ ಎಂದು ಆಕ್ಷೇಪಿಸಿದೆ.
![ಬಯಪಾ ವರದಿ](https://etvbharatimages.akamaized.net/etvbharat/prod-images/kn-bng-02-biaapalapses-auditreport-script-7201951_04102020203335_0410f_1601823815_67.jpg)
2017-18ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿ 104.97 ಕೋಟಿ ರೂ. ಮೊತ್ತವನ್ನು ಆಕ್ಷೇಪಣೆಯಲ್ಲಿಡಲಾಗಿರುತ್ತದೆ. ಈ ಬಗ್ಗೆನೂ ಬಯಪಾ ಯಾವುದೇ ಕ್ರಮ ವಹಿಸಿರುವುದು ಕಂಡು ಬಂದಿಲ್ಲ. ಕಡಿಮೆ ಬೆಟರ್ಮೆಂಟ್ ಶುಲ್ಕ ವಸೂಲಿಯಿಂದ ಪ್ರಾಧಿಕಾರಕ್ಕೆ ನಷ್ಟ ಉಂಟಾಗಿದ್ದು, ಒಟ್ಟು 102.34 ಕೋಟಿ ರೂ.ಗೆ ಲೆಕ್ಕಪರಿಶೋಧನೆಯಲ್ಲಿ ಆಕ್ಷೇಪಣೆ ವ್ಯಕ್ತಪಡಿಸಲಾಗಿದೆ.
ಆಡಿಟ್ ರಿಪೋರ್ಟ್‌ನಲ್ಲಿನ ಇತರೆ ಆಕ್ಷೇಪಣೆ : 2017-18ರ ಆಡಿಟ್ ರಿಪೋರ್ಟ್‌ಗೆ ಅನುಸರಣಾ ವರದಿ ಸಲ್ಲಿಸದಿರುವುದು, ಬಯಪಾ ಬಜೆಟ್‌ಗೆ ಅನುಮೋದನೆ ಪಡೆಯಲು ವಿಫಲ, ರಸೀದಿ ಪುಸ್ತಕಗಳಲ್ಲಿನ ಲೋಪದೋಷ, ಸಿಎ ನಿವೇಶನಗಳ ವಿವರಗಳನ್ನು ನಿರ್ವಹಿಸದಿರುವುದು ಕಂಡು ಬಂದಿದೆ.