ಆನೇಕಲ್/ಬೆಂಗಳೂರು: ಇದೇ ಹದಿನೇಳರ ಒಳಗಾಗಿ ಅಯೋಧ್ಯೆ ತೀರ್ಪು ಹೊರಬೀಳಲಿದ್ದು, ವಿವಾದಕ್ಕೆ ತೆರೆ ಬೀಳಲಿದೆ.
ಈ ಹಿನ್ನೆಲೆ ಆನೇಕಲ್ ಸುತ್ತ ಕೋಮು ಸಂಘರ್ಷ ಹರಡದಂತೆ ಹಾಗೂ ಯುವಜನತೆ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಹೆಚ್ಚು ಪರ-ವಿರೋಧ ಚರ್ಚೆ ಮಾಡದಂತೆ ಆನೇಕಲ್ ಪೊಲೀಸ್ ವೃತ್ತ ನಿರೀಕ್ಷಕ ಕೃಷ್ಣ ಲಂಬಾಣಿ ಎಚ್ಚರಿಸಿದ್ದಾರೆ. ಆನೇಕಲ್ ಪೊಲೀಸ್ ಠಾಣಾ ಆವರಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ಉಭಯ ಕೋಮಿನ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು ಶಾಂತಿ ನಡಿಗೆಯ ಪ್ರತಿಜ್ಞಾವಿಧಿ ಬೋಧಿಸಿದರು. ತೀರ್ಪು ಯಾರ ಪರ ಬಂದರೂ ಕಾನೂನು, ಸೌಹಾರ್ದತೆಗೆ ನಾಗರಿಕರು ಬೆಲೆ ಕೊಡಬೇಕು. ಈ ಕುರಿತು ಶಾಂತಿ ಕದಡುವ ಮಾತು, ಚರ್ಚೆ, ಗುಂಪುಗಳ ನಡುವೆ ಮಾತುಕತೆ ಇರಬಾರದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
ತೀರ್ಪಿನ ಪರ ಸಂಭ್ರಮವೂ ಬೇಡ, ಹಾಗೆಯೇ ಚಿಂತಿಸುವ ಅಗತ್ಯವೂ ಇಲ್ಲ. ಜೊತೆಗೆ ಈದ್ ಮಿಲಾದ್ ಆಚರಣೆಯನ್ನು ಶಾಂತಿ ಭಂಗವಾಗದಂತೆ ಆಚರಿಸಿಲು ಕೋರಲಾಗಿದೆ.ಟಿಪ್ಪು ಜಯಂತಿಯನ್ನು ಸರ್ಕಾರ ನಿಷೇಧಿಸಿರುವುದರಿಂದ ಆಚರಣೆ ಮಾಡದೇ ಸಹಕರಿಸಿ ಎಂದರು. ತಾಲೂಕು ದಂಡಾಧಿಕಾರಿ ದಿನೇಶ್ ಮಾತನಾಡಿ ಅಯೋಧ್ಯೆ ತೀರ್ಪಿನ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಕೊಡದಂತೆ ಹಿಂದೂ-ಮುಸ್ಲಿಂ ಸಹೋದರರು ಜವಾಬ್ದಾರಿಯಿಂದ ಜಾಗೃತಿ ವಹಿಸಬೇಕೆಂದು ತಿಳಿಸಿದರು.