ಬೆಂಗಳೂರು : ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು, 435 ಹುಲಿಗಳು ಪತ್ತೆಯಾಗಿವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದ್ದಾರೆ. ಅಂತಾರಾಷ್ಟ್ರೀಯ ಹುಲಿ ದಿನಕ್ಕೆ 2 ದಿನಗಳ ಮುನ್ನ ರಾಷ್ಟ್ರೀಯ ಪ್ರಾಣಿ ಹುಲಿ ಗಣತಿಯ ವಿವರ ಬಿಡುಗಡೆ ಮಾಡಲಾಗಿದೆ.
ರಾಷ್ಟ್ರೀಯ ಹುಲಿ ಪ್ರಾಧಿಕಾರ (ಎನ್.ಟಿ.ಸಿ.ಎ) ಮಾರ್ಗಸೂಚಿಯ ಪ್ರಕಾರ, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಹುಲಿ ಗಣತಿ ಮಾಡಲಾಗುತ್ತದೆ. ಇದರ ಭಾಗವಾಗಿ ಆನೆ ಸೇರಿ ಮಾಂಸಹಾರಿ ಮತ್ತು ಸಸ್ಯಹಾರಿ ಪ್ರಾಣಿಗಳ ಗಣತಿಯನ್ನೂ ದೇಶಾದ್ಯಂತ ನಡೆಸಲಾಗುತ್ತದೆ ಎಂದು ಸಚಿವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಪಶ್ಚಿಮ ಘಟ್ಟದ ಹೆಚ್ಚಿನ ಭಾಗ ಹೊಂದಿರುವ ಕರ್ನಾಟಕ ಹುಲಿಗಳ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿದೆ. 2021-22ರ ಅವಧಿಯಲ್ಲಿ ಹುಲಿ ಗಣತಿಯನ್ನು ವೈಜ್ಞಾನಿಕವಾಗಿ ಹಾಗೂ ಸಮರ್ಪಕವಾಗಿ ನಡೆಸಲಾಗಿದೆ. ರಾಜ್ಯದ 5 ಹುಲಿ ಸಂರಕ್ಷಿತ ಪ್ರದೇಶಗಳಿವೆ. ನಾಗರಹೊಳೆ, ಬಂಡೀಪುರ, ಭದ್ರಾ, ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ ಹಾಗೂ ಕಾಳಿ ಕಾನನ ಸೇರಿದಂತೆ 37 ವನ್ಯಜೀವಿ ಧಾಮಗಳಲ್ಲಿ ಒಟ್ಟು 37 ವಿಭಾಗಗಳಲ್ಲಿ ಹುಲಿ ಗಣತಿ ನಡೆಸಲಾಗಿದೆ.
ಈ ಗಣತಿಗೆ ಕ್ಯಾಮರಾ ಟ್ರ್ಯಾಪ್ ಮತ್ತು ಲೈನ್ ಟ್ರನ್ಸ್ಯಾಕ್ಟ್ ವಿಧಾನ ಬಳಸಲಾಗಿದೆ. ರಾಜ್ಯದ ಎಲ್ಲ ಸಂರಕ್ಷಿತ ಅರಣ್ಯಗಳಲ್ಲಿ ಅಳವಡಿಸಲಾಗಿದ್ದ 5,399 ಕ್ಯಾಮರಾ ಟ್ರ್ಯಾಪ್ನಲ್ಲಿ 66 ಲಕ್ಷಕ್ಕೂ ಹೆಚ್ಚು ವನ್ಯ ಜೀವಿಗಳ ಛಾಯಾಚಿತ್ರ ಕ್ರೋಢೀಕರಣವಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ ಹುಲಿಗಳ ಚಲನವಲನ, ಪ್ರಾದೇಶಿಕ ಪರಿಮಿತಿ (territory) ಮತ್ತು ಹುಲಿಗಳ ಮೈಮೇಲಿನ ಪಟ್ಟೆಗಳ ಆಧಾರದ ಮೇಲೆ ಸಂಖ್ಯೆಯನ್ನು ಲೆಕ್ಕಹಾಕಲಾಗಿದೆ ಎಂದು ಸಚಿವ ಖಂಡ್ರೆ ತಿಳಿಸಿದ್ದಾರೆ.
2022ರಲ್ಲಿ ರಾಜ್ಯದಲ್ಲಿ 435 ಹುಲಿಗಳು ಪತ್ತೆ: 2018ರಲ್ಲಿ ನಡೆದಿದ್ದ ಅಖಿಲ ಭಾರತ ಹುಲಿ ಗಣತಿ ಪ್ರಕಾರ, ಕರ್ನಾಟಕದಲ್ಲಿ ನಡೆದ ಕ್ಯಾಮರಾ ಟ್ರ್ಯಾಪ್ನಲ್ಲಿ 404 ಹುಲಿಗಳು ಪತ್ತೆಯಾಗಿದ್ದವು. ಇದನ್ನು ವನ್ಯಜೀವಿ ಸಂಖ್ಯಾಶಾಸ್ತ್ರದ ಪ್ರಕಾರ, ವಿಶ್ಲೇಷಿಸಿದಾಗ ರಾಜ್ಯದಲ್ಲಿ 475 ರಿಂದ 573 ಹುಲಿಗಳು ಇರಬಹುದು. 2022ರಲ್ಲಿ ರಾಜ್ಯದಲ್ಲಿ 435 ಹುಲಿಗಳು ಪತ್ತೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು.
ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 612, ಭದ್ರಾದಲ್ಲಿ 330, ಬಿಆರ್ಟಿಯಲ್ಲಿ 288, ಕಾಳಿಯಲ್ಲಿ 448, ನಾಗರಹೊಳೆಯಲ್ಲಿ 502 ಕ್ಯಾಮರಾ ಪಾಯಿಂಟ್ ಅಳವಡಿಸಲಾಗಿತ್ತು. ಇದರಲ್ಲಿ 376 ಅನನ್ಯ (ವಿಶಿಷ್ಟ) ಹುಲಿಗಳು ಪತ್ತೆಯಾಗಿವೆ ಎಂದು ಕರ್ನಾಟಕದ ಪರಿಸರ ಖಾತೆ ಸಚಿವರು ವಿವರಿಸಿದ್ದಾರೆ.
ಇದಲ್ಲದೇ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ 80, ಬೆಳಗಾವಿ ವಿಭಾಗದಲ್ಲಿ 119, ಭದ್ರಾವತಿ ವಿಭಾಗದಲ್ಲಿ 121, ಕಾವೇರಿ ವನ್ಯಜೀವಿ ಧಾಮದಲ್ಲಿ 473, ಚಿಕ್ಕಮಗಳೂರು ವನ್ಯಜೀವಿ ಅರಣ್ಯದಲ್ಲಿ 41, ಹಳಿಯಾಳದಲ್ಲಿ 106, ಕಾರವಾರ ವಿಭಾಗದಲ್ಲಿ 135, ಕೊಪ್ಪ ವನ್ಯಜೀವಿಧಾಮದಲ್ಲಿ 50, ಕುದುರೆಮುಖ ವಿಭಾಗದಲ್ಲಿ 173, ಮಡಿಕೇರಿ (ಬ್ರಹ್ಮಗಿರಿ, ಪುಷ್ಪಗಿರಿ ಮತ್ತು ತಲಕಾವೇರಿ) ವಿಭಾಗದಲ್ಲಿ 175, ಮಲೆ ಮಹದೇಶ್ವರ ಬೆಟ್ಟದಲ್ಲಿ 432, ಮೈಸೂರು ವಿಭಾಗದಲ್ಲಿ 36, ಶಿವಮೊಗ್ಗ ವನ್ಯಜೀವಿ ಧಾಮದಲ್ಲಿ 182, ಶಿರಸಿ ವಿಭಾಗದಲ್ಲಿ 107, ವಿರಾಜಪೇಟೆ ವಿಭಾಗದಲ್ಲಿ 111, ಯಲ್ಲಾಪುರ ವಿಭಾಗದಲ್ಲಿ 94 ಸೇರಿ ರಾಜ್ಯದಲ್ಲಿ ಒಟ್ಟಾರೆ 4786 ಕ್ಯಾಮರಾ ಪಾಯಿಂಟ್ ಅಳವಡಿಸಲಾಗಿತ್ತು. ಇವುಗಳಿಂದ ರಾತ್ರಿ ವೇಳೆಯಲ್ಲಿ 1.61 ಲಕ್ಷ ಸ್ನ್ಯಾಪ್ ಶಾರ್ಟ್ಸ್ ಗಳನ್ನು ತೆಗೆಯಲಾಗಿತ್ತೆಂದು ಖಂಡ್ರೆ ತಿಳಿಸಿದ್ದಾರೆ.
ಪ್ರಪಂಚದಲ್ಲಿ ಮೊದಲ ಬಾರಿಗೆ ಹುಲಿ ಗಣತಿ ನಡೆದಿದ್ದು ಭಾರತದಲ್ಲೇ. ಜಾರ್ಖಂಡ್‌ನ ಪಲಾಮು ಹುಲಿ ರಕ್ಷಿತಾರಣ್ಯದಲ್ಲಿ ಪ್ರಾಯೋಗಿಕ ಗಣತಿ ನಡೆದಿತ್ತು. 1972ರಲ್ಲಿ ವನ್ಯಜೀವಿ ಕಾಯ್ದೆ ಜಾರಿಗೆ ಬಂದ ನಂತರ 1972ರಿಂದ ಹುಲಿ ಗಣತಿಯನ್ನು ಆರಂಭಿಸಲಾಯಿತು ಮತ್ತು ಪ್ರತಿ 4 ವರ್ಷಗಳಿಗೊಮ್ಮೆ ಗಣತಿ ಕಾರ್ಯ ನಡೆಸಲಾಗುತ್ತಿದೆ.
ಇದನ್ನೂ ಓದಿ: ಹುಲಿ ಗಣತಿ ವರದಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ: ದೇಶದಲ್ಲಿರುವ ಹುಲಿಗಳ ನಿಖರ ಸಂಖ್ಯೆ ಬಹಿರಂಗ