ಬೆಂಗಳೂರು: ಎನ್‍ಸಿಇಆರ್‌ಟಿ ಮಾರ್ಗದರ್ಶನದಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಕ್ಯು.ಎಸ್.ಕ್ಯು.ಎ.ಎ.ಸಿ. ವತಿಯಿಂದ ನಡೆಸಲಾಗುವ ಎನ್‍ಟಿಎಸ್ ಮೊದಲನೇ ಹಂತದ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರಸ್ತುತ ವರ್ಷದಲ್ಲಿ 10ನೇ ತರಗತಿಯಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ಈ ಪರೀಕ್ಷೆ ತೆಗೆದುಕೊಳ್ಳಬಹುದಾಗಿದ್ದು, ಪರೀಕ್ಷೆ 2021ನೇ ಜನವರಿ 24ರಂದು ನಡೆಯಲಿದೆ. ವಿದ್ಯಾರ್ಥಿ ವೇತನ ಪಡೆಯುವ ಹಿನ್ನೆಲೆಯಲ್ಲಿ ನಡೆಯುವ ಈ ಪರೀಕ್ಷೆಯನ್ನು ಹೆಚ್ಚಿನ ವಿದ್ಯಾರ್ಥಿಗಳು ತೆಗೆದುಕೊಳ್ಳಬೇಕೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸರ್ಕಾರಿ, ಅನುದಾನಿತ, ಅನುದಾನ ರಹಿತ, ಸ್ಥಳೀಯ ಸಂಸ್ಥೆಗಳ ಹಾಗೆಯೇ ದೂರ ಶಿಕ್ಷಣದಲ್ಲಿ ಅಭ್ಯಸಿಸುತ್ತಿರುವ 10ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಬಹುದಾಗಿದೆ. ಪರೀಕ್ಷೆ ಕುರಿತು ಯಾವುದೇ ಗೊಂದಲವಿಲ್ಲದೆ ಪರೀಕ್ಷೆ ಅರ್ಜಿ ಭರ್ತಿ ಮಾಡಲು ಕೆಎಸ್‍ಇಇಬಿ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಲಾಗಿದೆ. ಹೆಚ್ಚಿನ ವಿವರಗಳಿಗೆ ಶಾಲೆಗಳ ಮುಖ್ಯೋಪಾಧ್ಯಾಯರು kseeb.kar.nic.in ವೆಬ್‍ಸೈಟ್ ಮೂಲಕ ಲಾಗಿನ್ ಆಗಿ ಎನ್‍ಟಿಎಸ್ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರೀಕ್ಷೆ ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಬೌದ್ಧಿಕ ಸಾಮರ್ಥ್ಯ ಮತ್ತು ಪ್ರಾಸಂಗಿಕ ಪ್ರವೃತ್ತಿ ಪರೀಕ್ಷೆಗಳು ನಡೆಯಲಿದ್ದು, ಕನ್ನಡ, ಇಂಗ್ಲಿಷ್, ಉರ್ದು ಮತ್ತು ಮರಾಠಿ ಮಾಧ್ಯಮಗಳಲ್ಲಿ ತೆಗೆದುಕೊಳ್ಳಬಹುದಾಗಿದೆ. ಪರೀಕ್ಷೆಗೆ ನವೆಂಬರ್ 30ರೊಳಗೆ ಅರ್ಜಿ ಸಲ್ಲಿಸಬಹುದು.
ಮೊದಲ ಹಂತದ ಪರೀಕ್ಷೆ ನಂತರ ದ್ವಿತೀಯ ಹಂತದ ಪರೀಕ್ಷೆ ನಡೆಯಲಿದ್ದು, ದ್ವಿತೀಯ ಹಂತದ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪಿಯು ತರಗತಿಗಳ ಅಭ್ಯಾಸದಲ್ಲಿ ಮಾಸಿಕ 1200 ರೂ. ಮತ್ತು ಪದವಿ ಮತ್ತು ಸ್ನಾತಕೋತ್ತರ ಪದವಿ ಹಂತದಲ್ಲಿ ಮಾಸಿಕ 2000 ರೂ. ಮತ್ತು ಉನ್ನತ ಶಿಕ್ಷಣದ ಹಂತದಲ್ಲಿ ಯುಜಿಸಿ ನಿಯಮಾನುಸಾರ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
ಹೆಚ್ಚಿನ ವಿವರಗಳಿಗೆ 080-23341615 ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಕಳೆದ ವರ್ಷ ಈ ಪರೀಕ್ಷೆಗೆ 1,23,101 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಎಸ್ಎಸ್ಎಲ್ಸಿ ಪರೀಕ್ಷೆ ಪಾಸ್ ಮಾಡಲು ಆದೇಶಿಸುವಂತೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್