ಬೆಂಗಳೂರು: ತಬ್ಲಿಘಿ ನಂಟಿರುವ ಬರೋಬ್ಬರಿ 19 ವಿದೇಶಿಗರನ್ನು ಪಾದರಾಯನಪುರದ ಒಂದೇ ವಾರ್ಡ್ನಲ್ಲಿ ಮಸೀದಿಯಲ್ಲಿ ಅಡಗಿಸಿಟ್ಟುಕೊಳ್ಳಲಾಗಿತ್ತು ಎಂದು ಬಿಜೆಪಿ ವಕ್ತಾರ ಎನ್.ಆರ್. ರಮೇಶ್ ಆರೋಪಿಸಿದ್ದಾರೆ. ತಬ್ಲಿಘಿಗಳು ಕಾನೂನು ಬಾಹಿರವಾಗಿ ವಾರ್ಡ್ನಲ್ಲಿ ವಾಸವಿದ್ದರು. ಪಾದರಾಯನಪುರದ ಸುಭಾನಿಯಾ ಮಸೀದಿಯಲ್ಲಿ ತಂಗಿದ್ದರು. ಮಸೀದಿಯ ಮುಖ್ಯಸ್ಥರೇ 19 ಜನರಿಗೆ ಆಶ್ರಯ ಕೊಟ್ಟಿದ್ದರು. ಅಲ್ಲದೇ ಸ್ಥಳೀಯ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ, ಶಾಸಕ ಜಮೀರ್ ಅಹ್ಮದ್ ಅವರಿಗೆ ಗೊತ್ತಿದ್ರೂ ಸುಮ್ಮನಿದ್ದರು ಎಂದು ಆರೋಪಿಸಿದ್ದಾರೆ.
19 ವಿದೇಶಿಗರ ವೀಸಾ ಅವಧಿ ಮುಗಿದಿದ್ದು ದೇಶದಲ್ಲಿ ಅಕ್ರಮವಾಗಿ ವಾಸ್ತವ್ಯ ಹೂಡಿದ್ದರು. ಇಂಡೋನೆಷಿಯಾ, ಖರ್ಗಿಸ್ತಾನ್ ವಿದೇಶಿಗರೆಲ್ಲ ದೆಹಲಿಯಿಂದ ವಾಪಸಾಗಿ ಪಾದರಾಯನಪುರದಲ್ಲಿ ತಂಗಿದ್ದರು. ಸೂರ್ಯ ಪ್ರಸಾದ್ ಅವರಿಂದ ಜಗಜೀವನ್ ರಾಮ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆ, ಈಗ ಎಫ್ಐಆರ್ ದಾಖಲಿಸಲಾಗಿದೆ. ಕೂಡಲೇ ಸರ್ಕಾರಕ್ಕೆ ವಿಚಾರ ಮುಚ್ಚಿಟ್ಟ ಜನ ಪ್ರತಿನಿಧಿಗಳ ವಿರುದ್ಧ ಕ್ರಮ ವಹಿಸಬೇಕು. ದೇಶ ದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು ಕೋವಿಡ್ 19 ಪ್ರಕರಣ ಹೆಚ್ಚಾದ ಬೆನ್ನಲ್ಲೇ, ಇಡೀ ದೇಶ ಲಾಕ್ಡೌನ್ ಆಗಿದೆ. ಆದರೆ ಇದರ ನಡುವೆಯೂ ಜಮಾತ್-ಇ-ತಬ್ಲಿಘಿ ಸಮಾವೇಶ ನಡೆದಿತ್ತು. ವಿದೇಶದವರು ಸೇರಿದಂತೆ ಸಾವಿರಾರು ಜನ ಇದರಲ್ಲಿ ಭಾಗಿಯಾಗಿದ್ರು. ಅದರಲ್ಲಿ ಭಾಗಿಯಾದವರ ಸಂಪೂರ್ಣ ಮಾಹಿತಿ ಇರಲಿಲ್ಲ. ಆದ್ರೆ ಪಾದರಾಯನಪುರ ಮಸೀದಿಯಲ್ಲಿ ಇಂಡೋನೇಷಿಯಾ, ಕರ್ಗಿಸ್ತಾನ್ ಸೇರಿದಂತೆ ಹಲವು ದೇಶದವರು ತಂಗಿದ್ದರು. ಪಾಸ್ಪೋರ್ಟ್ ಅವಧಿ ಮುಗಿದಿದ್ರೂ ಅವರನ್ನು ಮುಚ್ಚಿಟ್ಟು ದೇಶ ದ್ರೋಹ ಮಾಡಲಾಗಿದೆ ಎಂದರು. ಇನ್ನು ಶಾಸಕ ಜಮೀರ್ ಅಹ್ಮದ್ ಮೃತ ಮಹಿಳೆಯಿದ್ದ ಪ್ರದೇಶಕ್ಕೆ ತೆರಳಿದ ಹಿನ್ನೆಲೆ, ಅವರನ್ನು ಹೋಂ ಕ್ವಾರಂಟೈನ್ ಮಾಡಬೇಕು ಎಂದು ಆಗ್ರಹಿಸಿದರು.