ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರ ಮಹತ್ವದ ಸಭೆ ನ. 30ರಂದು ನಗರದ ಹೊರವಲಯದಲ್ಲಿ ನಡೆಯಲಿದೆ. ಅಂದು ಬೆಂಗಳೂರು ಹೊರವಲಯದ ತಾಜ್ ಎಕ್ಸೋಟಿಕ ರೆಸಾರ್ಟ್ನಲ್ಲಿ ಕಾಂಗ್ರೆಸ್ ಹಿರಿಯ ನಾಯಕರ ಸಭೆ ನಡೆಯಲಿದ್ದು, ಎಐಸಿಸಿ ಪ್ರತಿನಿಧಿಯಾಗಿ ಮಹಾರಾಷ್ಟ್ರ ಮಹಾಘಟ ಬಂಧನ್ ಸರ್ಕಾರದ ಹಿರಿಯ ಸಚಿವೆ ಯಶೋಮತಿ ಠಾಕೂರ್ ಭಾಗಿಯಾಗಲಿದ್ದಾರೆ.
ಪಕ್ಷ ಸಂಘಟನೆ, ಮೂರು ಉಪಚುನಾವಣೆ ಸಿದ್ಧತೆ, ಶಿರಾ, ಆರ್.ಆರ್.ನಗರ ಸೋಲಿನ ಆತ್ಮಾವಲೋಕನ, ಪಕ್ಷದೊಳಗಿನ ಆಂತರಿಕ ಅಸಮಾಧಾನಗಳ ಬಗ್ಗೆ ಚರ್ಚೆ ನಡೆಯಲಿದೆ. ಪರಸ್ಪರ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ಬಗ್ಗೆ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಮಹತ್ವದ ಸಭೆ ಹಮ್ಮಿಕೊಳ್ಳಲಾಗಿದೆ. ಅಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಿರುವ ನಾಯಕರು, ಈ ನಿಟ್ಟಿನಲ್ಲಿ ಹಿರಿಯರ ಮಾರ್ಗದರ್ಶನ ಆಲಿಸಲಿದ್ದಾರೆ.
ರಾಜ್ಯ ಕೈ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೂಡ ಭಾಗಿಯಾಗಲಿದ್ದಾರೆ. ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸುವ ಸುರ್ಜೆವಾಲಾ ಮುಂದಿನ ವಿಧಾನಸಭೆ ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಕಾಲಾವಧಿ ಇರುವ ಸಂದರ್ಭದಲ್ಲಿ ಪಕ್ಷದಲ್ಲಿರುವ ಸಣ್ಣಪುಟ್ಟ ಆಂತರಿಕ ಭಿನ್ನಾಭಿಪ್ರಾಯ ಸರಿಪಡಿಸುವ ಪ್ರಯತ್ನ ನಡೆಸಲಿದ್ದಾರೆ. ಅತ್ಯಂತ ಪ್ರಮುಖವಾಗಿ ಮೂಲ ಹಾಗೂ ವಲಸೆ ಕಾಂಗ್ರೆಸ್ಸಿಗರ ಭಿನ್ನಾಭಿಪ್ರಾಯ ಈಗಲೂ ಕಾಂಗ್ರೆಸ್ ಪಕ್ಷದಲ್ಲಿ ಇದೆ.
ಪಕ್ಷದ ಇಬ್ಬರು ಹಿರಿಯ ನಾಯಕರಾದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಮೊದಲಿನಿಂದಲೂ ಸಾಮರಸ್ಯ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಒಂದು ಉಭಯ ನಾಯಕರ ನಡುವೆ ಮಾತುಕತೆ ನಡೆಸಿ ಇರುವ ಸಣ್ಣಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸುವ ಪ್ರಯತ್ನ ನಡೆಯಲಿದೆ ಎನ್ನಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ನ ಇಬ್ಬರು ಹಿರಿಯ ನಾಯಕರ ನಿಧನ ಹಿನ್ನೆಲೆ: ನ.27ರಂದು ಸಿಡಬ್ಲ್ಯೂಸಿಯಿಂದ ಸಂತಾಪ ಸಭೆ