ಬೆಂಗಳೂರು: ಸುಖಾಸುಮ್ಮನೆ ನನ್ನ ಮಗನನ್ನ ಪೊಲೀಸರೇ ಕರೆದುಕೊಂಡು ಠಾಣೆಯಲ್ಲಿ ಕೂರಿಸಿಕೊಂಡು ಪೊಲೀಸರೇ ಅವನನ್ನು ಕ್ರಿಮಿನಲ್ ಮಾಡುತ್ತಿದ್ದಾರೆ ಎಂದು ನಟೋರಿಯಸ್ ರೌಡಿಶೀಟರ್ ಸೈಕಲ್ ರವಿ ಪತ್ನಿ ಕೋಮಲ ಗಂಭೀರ ಆರೋಪ ಮಾಡಿದ್ದಾರೆ.
ಸೈಕಲ್ ರವಿ ಪುತ್ರನನ್ನ ಕೆಂಪೇಗೌಡ ನಗರ ಪೊಲೀಸರು ಠಾಣೆಗೆ ಕರೆ ತಂದು ಕೂಡಿಹಾಕಿದ ಹಿನ್ನೆಲೆ ಕಿಡಿಕಾರಿರುವ ಕೋಮಲ, ಸೈಕಲ್ ರವಿ ಬೇಕು ಅಂದಾಗ ಮನೆಯವರನ್ನು ಕರ್ಕೊಂಡು ಹೋಗ್ತಾರೆ.. ಅದೇ ತರಹ ನನ್ನದೊಡ್ಡ ಮಗನನ್ನ ಕರೆದುಕೊಂಡು ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲ ಪೊಲೀಸರು ರೌಡಿ ಮಗ.. ರೌಡಿ ಮಗ ಅಂತ ಹೇಳುತ್ತಾರೆ.. ಪೊಲೀಸರೇ ನನ್ನ ಮಗನನ್ನ ಕ್ರಿಮಿನಲ್ ಮಾಡುತ್ತಿದ್ದಾರೆ. ನನ್ನ ಮಗ ಶಿವಶಂಕರ್ ಬಿಎ ಮಾಡಿಕೊಂಡಿದ್ದಾನೆ. ಅವನನ್ನ ಒಂದೊಳ್ಳೆ ಮನುಷ್ಯನನ್ನಾಗಿ ಮಾಡಬೇಕೆಂದು ಕಷ್ಟಪಡುತ್ತಿದ್ದೇನೆ. ಆದರೆ, ಪೊಲೀಸರು ನನ್ನ ಕುಟುಂಬವನ್ನ ಬಿಡುತ್ತಿಲ್ಲ. ನನ್ನ ಗಂಡನನ್ನು ನೋಡಿಯೇ ಎಷ್ಟೋ ದಿನಗಳಾಯಿತು. ಹೀಗೆ ತೊಂದರೆ ಕೊಟ್ಟರೆ ಪೊಲೀಸ್ ಕಮೀಷನರ್ ಕಚೇರಿ ಮುಂದೆ ಪೆಟ್ರೋಲ್ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಎಚ್ಚರಿಸಿದರು.
ನನ್ನ ತಮ್ಮ ರಾಜೇಂದ್ರನನ್ನೂ ಕರೆದುಕೊಂಡು ಠಾಣೆಯಲ್ಲಿ ಕೂರಿಸಿಕೊಳ್ಳುತ್ತಿದ್ದರು. ಅವನ ಮೇಲೆ ರೌಡಿಶೀಟ್ ಓಪನ್ ಮಾಡಿದ್ದರು. ಆರು ತಿಂಗಳ ಹಿಂದೆ ಹಾರ್ಟ್ ಅಟ್ಯಾಕ್ ಆಗಿ ಅವನು ಮೃತಪಟ್ಟ.. ಮತ್ತೋರ್ವ ರೌಡಿಶೀಟರ್ ಬೇಕರಿ ರವಿ ಪತ್ನಿಗೆ ಕೂಡ ಆರು ತಿಂಗಳವರೆಗೂ ಟಾರ್ಚರ್ ಕೊಡುತ್ತಿದ್ದಾರೆ. ಮನೆಯವರನ್ನ ಕರೆದುಕೊಂಡು ಹೋದರೆ ಸೈಕಲ್ ರವಿ ಸಿಗುತ್ತಾನೆ ಎಂಬ ಕಾರಣಕ್ಕೆ ಕುಟುಂಬಸ್ಥರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಸೈಕಲ್ ರವಿ ಯಾರು ?
ಸುಬ್ರಮಣ್ಯಪುರ ಪೊಲೀಸ್ ಠಾಣೆಯ ರೌಡಿಶೀಟರ್ ರವಿಕುಮಾರ್ ಅಲಿಯಾಸ್ ಸೈಕಲ್ ರವಿ. 6 ಕೊಲೆ, ನಾಲ್ಕು ಕೊಲೆ ಯತ್ನ, 15 ಹೆಚ್ಚು ಅಪಹರಣ, ಸುಲಿಗೆಯಂತಹ ಒಟ್ಟು 32 ಕೇಸ್‍ಗಳು ಈತನ ಮೇಲಿವೆ. 16 ಪೊಲೀಸ್ ಠಾಣೆಗಳಿಗೆ ಈತ ಬೇಕಾಗಿದ್ದಾನೆ. ಸುಬ್ರಹ್ಮಣ್ಯಪುರವನ್ನು ತನ್ನ ರೌಡಿಸಂ ನೆಲೆಯಾಗಿಸಿಕೊಂಡಿದ್ದ ಸೈಕಲ್ ರವಿ, ಬೆಂಗಳೂರು ದಕ್ಷಿಣ ಭಾಗ, ಕೆಂಗೇರಿ, ಜ್ಞಾನಭಾರತಿ, ಮೈಕೋ ಲೇಔಟ್, ಕೆಪಿ ಅಗ್ರಹಾರ, ಯಶವಂತಪುರ, ರಾಮಮೂರ್ತಿನಗರಗಳಲ್ಲಿ ಈತನ ರೌಡಿ ಚಟುವಟಿಕೆ ನಡೆಸುತ್ತಿದ್ದ. ಬೆಂಗಳೂರು ಹೊರವಲಯದಲ್ಲೂ ಕ್ರಿಯಾಶೀಲನಾಗಿದ್ದ ಈತ ಎಲ್ಲ ಕಡೆಯಲ್ಲೂ ತನ್ನ ಸಹಚರರ ತಂಡ ಕಟ್ಟಿಕೊಂಡಿದ್ದಾನೆ.
ಇದನ್ನೂ ಓದಿ:ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ.. ಆಟೋರಿಕ್ಷಾಗೆ ಹಗ್ಗ ಕಟ್ಟಿ ಎಳೆದು ಸಂಸದ ಶಶಿ ತರೂರ್ ಅಣುಕು..