ಬೆಂಗಳೂರು: ಮನೆ ಮೇಲೆ ಪಾರಿವಾಳ ತನ್ನ ಕೂತಿದೆ, ಅದನ್ನು ಹಿಡಿದುಕೊಂಡು ಹೋಗುವುದಾಗಿ ನಂಬಿಸಿ ಮನೆಗಳ್ಳತನ ಮಾಡುತ್ತಿದ್ದ ಚಾಲಾಕಿ ಖದೀಮನನ್ನು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ. ಇಟ್ಟಮಡು ನಿವಾಸಿಯಾಗಿರುವ ನಾಗೇಂದ್ರ ಆಲಿಯಾಸ್ ಬ್ಯಾಡ್ ನಾಗ ಬಂಧಿತ ಖದೀಮನಾಗಿದ್ದು, ಆತನಿಂದ 100 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ.
ಆರೋಪಿಗೆ ಮಾಡಲು ಯಾವುದೇ ಕೆಲಸವಿರಲಿಲ್ಲ. ಪಾರಿವಾಳ ಸಾಕುವುದನ್ನು ರೂಢಿಗತ ಮಾಡಿಕೊಂಡಿದ್ದ ನಾಗ, ಬೆಂಗಳೂರಿನ ಚೆನ್ನಮ್ಮನ್ನಕೆರೆ, ಹೊಸಕೆರೆಹಳ್ಳಿ, ಇಟ್ಟಮಡು, ಕತ್ರಿಗುಪ್ಪೆ ಸುತ್ತಮುತ್ತ ಹಗಲಲ್ಲಿ ಪಾರಿವಾಳ ಹಾರಿಸುತ್ತಿದ್ದ. ಹೀಗೆ ಹಗಲಲ್ಲಿ ಪಾರಿವಾಳ ಹಾರಿಸುವ ನೆಪದಲ್ಲಿ ಪ್ರದೇಶಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದ. ಅದೇ ನೆಪದಲ್ಲಿ ಕೈಯಲ್ಲಿ ಪಾರಿವಾಳ ಹಿಡಿದು ಐಷಾರಾಮಿ ಮನೆಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದ. ಪಾರಿವಾಳಗಳನ್ನು ಮನೆ ಮೇಲೆ ಹಾರಿಸಿ, ಬಳಿಕ ನಿಮ್ಮ ಮನೆ ಮೇಲೆ ಪಾರಿವಾಳ ಕೂತಿದೆ. ಅದನ್ನು ಹಿಡಿದುಕೊಂಡು ಹೋಗಬೇಕು ಎಂದು ಹೇಳುತ್ತ ಮನೆಗೆ ಪ್ರವೇಶಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಉದ್ಯಮಿ ಮನೆಗೆ ಕನ್ನ:
ಕಳೆದ ವಾರ ಇದೇ ರೀತಿ ಇಟ್ಟಮಡುವಿನ ಉದ್ಯಮಿ ಸತ್ಯನಾರಾಯಣ ಎಂಬುವರ ಮನೆ ಮೇಲೆ ಆರೋಪಿಯು ಪಾರಿವಾಳ ಹಾರಿಸಿದ್ದ. ಈ ವೇಳೆ ಉದ್ಯಮಿ ಮನೆಯಲ್ಲಿ ಯಾರೂ ಇರಲಿಲ್ಲ, ಇಡೀ ಕುಟುಂಬ ಬೇರೆ ಕಡೆ ಹೋಗಿತ್ತು. ಮನೆಯಲ್ಲಿ ಮಗಳೊಬ್ಬಳೆ ಇರುವುದು ನಾಗನ ಗಮನಕ್ಕೆ ಬಂದಿತ್ತು. ಮಾರನೇ ದಿನ ರಾತ್ರಿ ಸತ್ಯನಾರಾಯಣರ ಮನೆಗೆ ನುಗ್ಗಿದ್ದ ಬ್ಯಾಡ್ ನಾಗ ಕೈಗೆ ಸಿಕ್ಕ ಮೊಬೈಲ್, ಲ್ಯಾಪ್ ಟಾಪ್, ಬೆಲೆಬಾಳುವ ವಸ್ತು ಹಾಗೂ 4.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದ. ನಾಗ ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಂತೆ ಆತನ ಸಹಚರರು ಮನೆಯೊಳಗೆ ನಿಂತು ಕಾವಲು ಕಾಯುತ್ತಿದ್ದರು.
ಸದ್ಯ ಪ್ರಕರಣ ಸಂಬಂಧ ಉದ್ಯಮಿ ಸತ್ಯನಾರಾಯಣ ಚೆನ್ನಮ್ಮನ ಕೆರೆ ಠಾಣೆಯಲ್ಲಿ ದಾಖಲಿಸಿದ ದೂರಿನನ್ವಯ ಪೊಲೀಸರು ಆರೋಪಿ ಬ್ಯಾಡ್ ನಾಗನನ್ನು ಬಂಧಿಸಿ, 100 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ನಾಗನ ಕೃತ್ಯಕ್ಕೆ ಸಹಾಯ ಮಾಡುತ್ತಿದ್ದ ಆತನ ಸಹಚರರು ಪರಾರಿಯಾಗಿದ್ದು, ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳೆಯ ಬರ್ಬರ ಹತ್ಯೆ.. ಮನೆಯಿಂದ ಹೊರಬರುತ್ತಿದ್ದ ಹೊಗೆಯಿಂದ ಪ್ರಕರಣ ಬೆಳಕಿಗೆ