ಬೆಂಗಳೂರು: ಟ್ರಾಫಿಕ್ ನಿಯಮ ಉಲ್ಲಂಘಿಸಿದವರ ಮೇಲೆ ಪೊಲೀಸರಷ್ಟೇ ಅಲ್ಲ ಇನ್ಮುಂದೆ ಸಾರ್ವಜನಿಕರೂ ಕೂಡ ಕ್ರಮ ತೆಗೆದುಕೊಳ್ಳಬಹುದು. ಬೆಂಗಳೂರು ಸಂಚಾರ ಪೊಲೀಸರು ಸಾರ್ವಜನಿಕರಿಗೆ ಈ ಅವಕಾಶ ನೀಡಿದ್ದಾರೆ.
ಟ್ರಾಫಿಕ್ ನಿಯಮಗಳ ಉಲ್ಲಂಘನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ನಿಯಮ ಉಲ್ಲಂಘಿಸುವವರಿಗೆ ಶಾಕ್ ಕೊಡಲು ನಗರ ಪೊಲೀಸ್ ಆಯುಕ್ತರು ಹೊಸ ಪ್ಲಾನ್ ಮಾಡಿಕೊಂಡಿದ್ದಾರೆ.


ನಿಮ್ಮ ಏರಿಯಾಗಳ ಸುತ್ತಮುತ್ತಲಿನ ಜಂಕ್ಷನ್ ಅಥವಾ ಸಿಗ್ನಲ್ಗಳಲ್ಲಿ ಸಂಚಾರಿ ವ್ಯವಸ್ಥೆಯಲ್ಲಿ ನ್ಯೂನತೆ ಕಂಡುಬಂದರೆ ತಿಳಿಸುವಂತೆ ಟ್ವಿಟರ್ನಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ನಿನ್ನೆ ಮನವಿ ಮಾಡಿಕೊಂಡಿದ್ದರು. ಇದೀಗ ಮತ್ತೊಂದು ಟ್ವೀಟ್ ಮಾಡಿರುವ ಆಯುಕ್ತರು, ರಾಜಧಾನಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಕಂಡುಬಂದರೆ ಕೂಡಲೇ ಜಾರಿಯಲ್ಲಿರುವ ಪ್ಲಬಿಕ್ ಐ ಆ್ಯಪ್ನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನದ ಪೋಟೊ ಹಾಕುವಂತೆ ಆಯುಕ್ತರು ಮನವಿ ಮಾಡಿಕೊಂಡಿದ್ದಾರೆ.
ಈ ಮೂಲಕ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಸಾರ್ವಜನಿಕರು ಕೂಡ ಕ್ರಮಕೈಗೊಳ್ಳುವ ಅವಕಾಶ ಕಲ್ಪಿಸಿದ್ದಾರೆ. ಮೊದಲು ಪ್ಲೆಸ್ಟೋರ್ನಲ್ಲಿ ಪಬ್ಲಿಕ್ ಐ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಬಳಿಕ ಸಂಚಾರ ನಿಯಮ ಉಲ್ಲಂಘಿಸುವವರ ವಾಹನದ ಫೋಟೊ ತೆಗೆದು, ಪಬ್ಲಿಕ್ ಐ ಆ್ಯಪ್ನಲ್ಲಿ ಅಪ್ಲೋಡ್ ಮಾಡಬೇಕು.
ನಿಯಮ ಉಲ್ಲಂಘನೆಯ ಫೋಟೊ ಪರಿಶೀಲಿಸಿ ಟ್ರಾಫಿಕ್ ಮ್ಯಾನೆಜ್‌ಮೆಂಟ್ ಸೆಂಟರ್ ಮೂಲಕ ನೇರವಾಗಿ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ನೋಟಿಸ್ ಜಾರಿಯಾಗಲಿದೆ. ಫೋಟೊ ಅಪ್ಲೋಡ್ ಮಾಡುವ ಸಾರ್ವಜನಿಕರ ಮಾಹಿತಿ ಗುಪ್ತವಾಗಿ ಇಡಲಿದ್ದೇವೆ ಎಂದು ಆಯುಕ್ತರು ತಿಳಿಸಿದ್ದಾರೆ.