ಬೆಂಗಳೂರು: ರಾಜ್ಯಕ್ಕೆ 2,333 ಕೋಟಿ ರೂ. ಜಿಎಸ್‌ಟಿ ಪರಿಹಾರ ಬಿಡುಗಡೆ ಮಾಡುವಂತೆ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ರಾಜ್ಯ ಸರ್ಕಾರ ಮನವಿ ಮಾಡಿತು. ಈ ಸಂಬಂಧ ಕೂಡಲೇ ಜಿಎಸ್‌ಟಿ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರ ಹಣಕಾಸು ಸಚಿವೆ ಸೂಚನೆ ನೀಡಿದ್ದಾರೆ.
ದೆಹಲಿಯಲ್ಲಿ ಇಂದು 52ನೇ ಜಿಎಸ್‌ಟಿ ಕೌನ್ಸಿಲ್ ಸಭೆ ನಡೆದಿದ್ದು, ರಾಜ್ಯದ ಪರವಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಸಭೆಯಲ್ಲಿ ಪಾಲ್ಗೊಂಡರು. ಈ ವೇಳೆ ಸಚಿವರು ರಾಜ್ಯಕ್ಕೆ 2,333 ಕೋಟಿ ರೂ. ಜಿಎಸ್ ಟಿ ಪರಿಹಾರ ಬಾಕಿ ಉಳಿದುಕೊಂಡಿದೆ. ಅದನ್ನು ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡಲೇ ಬಾಕಿ ಜಿಎಸ್‌ಟಿ ಪರಿಹಾರ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ರಾಜ್ಯದ ಮನವಿ ಮೇರೆಗೆ, ಅನ್ ಲೇಬಲ್ಡ್ ರಾಗಿ ಮಿಶ್ರಣಕ್ಕೆ ಜಿಎಸ್ಟಿಯಿಂದ ರಿಯಾಯತಿ ನೀಡಲಾಗಿದೆ. ಲೇಬಲ್ಡ್ ರಾಗಿ ಮಿಶ್ರಣಕ್ಕೆ 12/18% ಜಿಎಸ್‌ಟಿ ಬದಲು ಕೇವಲ 5% ಜಿಎಸ್‌ಟಿ ವಿಧಿಸಲು ನಿರ್ಧರಿಸಲಾಗಿದೆ. ಸಿರಿ ಧಾನ್ಯಗಳ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಕಡಿತ ಮಾಡುವಂತೆ ರಾಜ್ಯ ಸರ್ಕಾರ ಒತ್ತಾಯಿಸುತ್ತಲೇ ಇದೆ.
ಸಭೆಯಲ್ಲಿ ತಂಬಾಕು, ತಂಪು ಪಾನೀಯಗಳು, ಐಷಾರಾಮಿ ಕಾರುಗಳು ಸೇರಿದಂತೆ ವಿವಿಧ ಉತ್ಪನ್ನಗಳ ಮೇಲೆ ವಿಧಿಸುತ್ತಿರುವ ಮೇಲು ಸುಂಕದ (ಸೆಸ್) ಮೊತ್ತವನ್ನು ಈಗ ಕೋವಿಡ್ ಅವಧಿಯಲ್ಲಿ ಕೇಂದ್ರ ಸರ್ಕಾರ ನೀಡಿದ್ದ ಸಾಲದ ಮರುಪಾವತಿಗೆ ಹೊಂದಾಣಿಕೆ ಮಾಡಲಾಗುತ್ತದೆ. ಸಾಲ ಮರುಪಾವತಿ ಆದ ಬಳಿಕ ಸೆಸ್‌ಗಳನ್ನು ಹಂಚಿಕೆ ಮಾಡುವ ಕುರಿತೂ ಮಾಹಿತಿ ಹಂಚಿಕೊಳ್ಳುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು.
ಇದನ್ನೂ ಓದಿ: ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ 52ನೇ ಜಿಎಸ್‌ಟಿ ಕೌನ್ಸಿಲ್ ಸಭೆ