ಬೆಂಗಳೂರು: ಕೊರೊನಾ ಸಂಕಷ್ಟದ ಕಾಲದಲ್ಲಿ ಸಹಕರಿಸದ ಆಸ್ಪತ್ರೆ ಹಾಗೂ ಲ್ಯಾಬ್ಗಳಿಗೆ ನೋಟಿಸ್ ನೀಡಿ ಸೀಜ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.
ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಹಲವು ಆಸ್ಪತ್ರೆಗಳು ಕೋವಿಡ್ ಆಸ್ಪತ್ರೆಗಳಾಗಿ ಮಾರ್ಪಾಟ್ಟಿವೆ. ಈ ಮಧ್ಯೆ ನಾನ್ ಕೋವಿಡ್ ರೋಗಿಗಳಿಗೂ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಯಾವುದೇ ಆಸ್ಪತ್ರೆಗಳಿಗೆ ಹೋದರೂ ಅಲ್ಲಿ 'ನೋ ಬೆಡ್' ಎಂಬ ಬೋರ್ಡ್ ಕಾಣ ಸಿಗುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಎರಡು ಆಸ್ಪತ್ರೆಗಳಲ್ಲೂ ರೋಗಿಗಳಿಂದ ತುಂಬಿ ಹೋಗಿವೆ. ಒಂದು ಕಡೆ ಕೋವಿಡ್ ಸೋಂಕಿತರು ಮತ್ತೊಂದು ಕಡೆ ನಾನ್ ಕೋವಿಡ್ ರೋಗಿಗಳ ಚಿಕಿತ್ಸೆ ಈ ಮಧ್ಯೆ ಕೋವಿಡ್ ಲಸಿಕಾ ಕಾರ್ಯಕ್ರಮಗಳನ್ನ ನಡೆಸಲಾಗುತ್ತಿದೆ.
ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಆಸ್ಪತ್ರೆಗಳು ಕೋವಿಡ್ ಲಸಿಕೆಗೆ ಹಾಗೂ ಚಿಕಿತ್ಸೆಗೆ ಅಧಿಕ ಶುಲ್ಕ ಪಡೆದುಕೊಳ್ತಿದ್ಯಾ ಅನ್ನೋ ಪ್ರಶ್ನೆ ಸಹಜವಾಗಿ ಕಾಡುತ್ತಿದೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲೆ ಲಸಿಕೆಯನ್ನ ಉಚಿತವಾಗಿ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆಗೆ 250 ರುಪಾಯಿ ನಿಗದಿ ಮಾಡಲಾಗಿದೆ. ಆದರೆ, ಇತ್ತೀಚಿಗೆ ಲಸಿಕೆ ಖಾಲಿ ಎಂಬ ಮಾತುಗಳು ಕೇಳಿ ಬರುತ್ತಿದೆ. ಹಾಗೇ, ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ಶುಲ್ಕ ಕಟ್ಟಲು ಆಗದೇ ಜನರೇ ಸ್ವತಃ ಸರ್ಕಾರಿ ಕೋಟಾದಡಿ ಹೋಗುತ್ತಿದ್ದು, ಸುಲಿಗೆ ಮಾಡುವ ಖಾಸಗಿ ಆಸ್ಪತ್ರೆಗೆ ಬ್ರೇಕ್ ಹಾಕಿದ್ದಾರೆ. ಯಾಕೆಂದರೆ ಕೋವಿಡ್ ಚಿಕಿತ್ಸಾ ವಿವರಗಳನ್ನ ಆರೋಗ್ಯ ಇಲಾಖೆಗೆ ಅಪಡೇಟ್ ಮಾಡಬೇಕಿರುವ ಕಾರಣಕ್ಕೆ ಸದ್ಯ ದುಬಾರಿ ಶುಲ್ಕ ಪ್ರಮಾಣ ಕಡಿಮೆ ಆಗಿದೆ.
ಸ್ವಾಬ್ ಟೆಸ್ಟ್ ಫಲಿತಾಂಶ ಅಪ್ಲೋಡ್ ಮಾಡದ ಲ್ಯಾಬ್ ಗಳಿಗೆ ಬೀಗ ಮುದ್ರೆ
ಖಾಸಗಿ ಆಸ್ಪತ್ರೆ ಹಾಗೂ ಲ್ಯಾಬ್ಗಳ ಮೇಲೂ ಆರೋಗ್ಯಾಧಿಕಾರಿಗಳು ತಪಾಸಣೆ ನಡೆಸಿ ಹಲವು ಲ್ಯಾಬ್ಗಳಿಗೆ ಬೀಗ ಮುದ್ರೆ ಹಾಕಲಾಗಿದೆ. ಜನರು ಸ್ವಾಬ್ ಪರೀಕ್ಷೆಗೆ ನೀಡಿ 3 -4 ದಿನಗಳಾದರೂ ನೆಗೆಟಿವ್/ ಪಾಸಿಟಿವ್ ರಿಪೋರ್ಟ್ ಬಾರದೇ, ಬಿಯು ನಂಬರ್ ಸಿಗದೇ ಆಸ್ಪತ್ರೆಗೆ ದಾಖಲಾಗದ ಪರಿಸ್ಥಿತಿ ಉದ್ಭವಿಸಿತ್ತು. ಈ ಕಾರಣಕ್ಕೆ 24 ಗಂಟೆಯೊಳಗೆ ಸ್ವಾಬ್ ಟೆಸ್ಟ್ ಫಲಿತಾಂಶವನ್ನ ಐಸಿಎಂಆರ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಲು ಸೂಚನೆ ನೀಡಲಾಗಿತ್ತು. ಆದರೂ ನಗರದ ಕೆಲ ಲ್ಯಾಬ್ಗಳು ಪರೀಕ್ಷಾ ಫಲಿತಾಂಶವನ್ನ ತಡವಾಗಿ ಅಪ್ಲೋಡ್ ಮಾಡಿದ ಕಾರಣಕ್ಕೆ ಕಾರಣ ಕೇಳಿ ನೋಟಿಸ್ ನೀಡಿ ಲ್ಯಾಬ್ಗಳಿಗೆ ಬೀಗ ಮುದ್ರೆ ಹಾಕಲಾಗಿದೆ.
ಶೋಕಾಸ್ ನೋಟಿಸ್ ಜೊತೆಗೆ ಬೀಗ ಮುದ್ರೆ ಬಿದ್ದ ಲ್ಯಾಬ್ಗಳು
- ಮೆಡಲ್ ಲ್ಯಾಬ್
- ಆರತಿ ಲ್ಯಾಬ್
- ಆರ್ ವಿ ಮೆಟ್ರೋ ಪಾಲಿಸ್ ಲ್ಯಾಬ್
- ಬಿಜಿಎಸ್ ಗ್ಲೋಬಲ್ ಮೆಡಿಕಲ್ ಕಾಲೇಜು
ಈ ಹಿಂದೆ ಯಲಹಂಕ ವಲಯದ ಕೊಡಿಗೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಟೆಸ್ಟಿಂಗ್ ಮಾಡದೇ ಟೆಸ್ಟಿಂಗ್ ಸಾಮಗ್ರಿಗಳನ್ನ ಭರ್ತಿ ಮಾಡುತ್ತಿದ್ದ ಇಬ್ಬರು ಸ್ವಾಬ್ ಕಲೆಕ್ಟರ್ಗಳನ್ನು ಅಮಾನತು ಮಾಡಲಾಗಿತ್ತು. ಈ ಸಂಬಂಧ ಕೊಡಿಗೇಹಳ್ಳಿ ಬಳಿ ಸ್ವ್ಯಾಬ್ ಟೆಸ್ಟ್ ದುರುಪಯೋಗ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಕೋವಿಡ್ ಬೆಡ್ ನೀಡದ ಆಸ್ಪತ್ರೆಗಳಿಗೆ ನೋಟಿಸ್
ದಿನೇ ದಿನೆ ಸೋಂಕು ಹೆಚ್ಚಾದ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಮೀಸಲಿರಿಸುವಂತೆ ಆದೇಶಿಸಲಾಗಿತ್ತು. ಆದರೂ ಸರ್ಕಾರದ ಮಾತಿಗೆ ಕ್ಯಾರೆ ಅನ್ನದ ಕೆಲ ಖಾಸಗಿ ಆಸ್ಪತ್ರೆಗಳು ಭಂಡತನ ತೋರಿದ್ದವು. ನಗರದ ವಿಕ್ರಂ ಆಸ್ಪತ್ರೆ, ಪೋರ್ಟಿಸ್ ಆಸ್ಪತ್ರೆ, ಆಸ್ಟರ್ ಸಿಎಂಐ, ಕೊಲಂಬಿಯಾ ಏಷಿಯಾ ಹಾಗೂ ಬ್ಯಾಪ್ಟಿಸ್ಟ್ ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದೆ. ಹಾಗೇ ರೋಗಿಗಳ ಮಾಹಿತಿಗಾಗಿ, ಮೀಸಲಿಟ್ಟಿರುವ ಸಂಖ್ಯೆಯ ಸೂಚನಾ ಫಲಕವನ್ನು ಪ್ರವೇಶ ದ್ವಾರದ ಮುಂದೆ ಅಳವಡಿಸಬೇಕು.ಇದನ್ನೂ ಹಲವು ಆಸ್ಪತ್ರೆಗಳು ಮಾಡಿಲ್ಲ.
66 ಆಸ್ಪತ್ರೆಗಳಿಗೆ ತುರ್ತು ನೋಟಿಸ್
ಇನ್ನು ಸೋಂಕು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಪಾಲಿಕೆ ಈ ಹಿಂದೆ ಬರೋಬ್ಬರಿ 66 ಖಾಸಗಿ ಆಸ್ಪತ್ರೆಗಳಿಗೆ ತುರ್ತು ನೋಟಿಸ್ ಜಾರಿ ಮಾಡಿತ್ತು. ಸರ್ಕಾರದ ಆದೇಶದಂತೆ ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಲು ಸೂಚಿಸಲಾಯಿತು.
ಕೋವಿಡ್ ಚಿಕಿತ್ಸೆ- ಲಸಿಕೆ ಒಂದೇ ಕಡೆ
ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇತ್ತ ಲಸಿಕೆ ಹಾಕಿಸಿಕೊಳ್ಳಲು ಜನ ಲಸಿಕಾ ಕೇಂದ್ರಗಳತ್ತ ಬರುತ್ತಿದ್ದಾರೆ. ಆದರೆ, ಈ ನಡುವೆ ಚಿಕಿತ್ಸೆಗೆ ಸಿಬ್ಬಂದಿ ಕೊರತೆ ಇರುವಾಗ ಹೇಗೆ ಕಾರ್ಯನಿರ್ವಹಿಸುತ್ತೀರಿ ಎಂದು ಡಿಸಿಎಂ ಅಶ್ವತ್ಥ ನಾರಾಯಣರನ್ನ ಕೇಳಿದ್ದರೆ, ಲಸಿಕೆಗೆ ತುಂಬಾ ಬೇಡಿಕೆ ಇದೆ. ನೂಕುನುಗ್ಗಲು ಆಗಬಾರದು ಎನ್ನುವ ಕಾರಣಕ್ಕೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 18 ವರ್ಷದ ನಂತರ ಎಲ್ಲರಿಗೂ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಆರೋಗ್ಯ ಸಿಬ್ಬಂದಿ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.