ಬೆಂಗಳೂರು: ಮುಂದಿನ ಸಿಎಂ ಯಾರು ಅನ್ನೋದರ ಬಗ್ಗೆ ಮಾತನಾಡುವುದು ಕಾಂಗ್ರೆಸ್ ಸಂಸ್ಕೃತಿಯಲ್ಲ. ಚುನಾವಣೆಯ ಫಲಿತಾಂಶ ಬಂದ ಬಳಿಕ ಸಿಎಂ ಅಭ್ಯರ್ಥಿ ಯಾರು ಅನ್ನೋದನ್ನು ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದು ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ತಿಳಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ಮಾಡಿ ಅದರ ಅಭಿಪ್ರಾಯದಂತೆ ಹೈಕಮಾಂಡ್ ಸಿಎಂ ಯಾರು ಅನ್ನೋದನ್ನು ನಿರ್ಧಾರ ಮಾಡುತ್ತೆ. ಮೊದಲು ಪಕ್ಷ ಬಹುಮತ ಬರಲು ಪ್ರಯತ್ನ ಮಾಡಿ. ಆ ಮೇಲೆ ಸಿಎಂ ವಿಚಾರ. ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಹೇಳಿದ್ದಾರೆ. ಸೌಮ್ಯ ರೆಡ್ಡಿ ಮತ್ತು ಹನುಮಂತರಾಯಪ್ಪ ಡಿಕೆಶಿ ಮುಂದಿನ ಸಿಎಂ ಎಂದು ಹೇಳಿದ್ದಾರೆ. ಇದು ಪಕ್ಷದ ಶಿಸ್ತಿಗೆ ವಿರುದ್ಧ. ಇಂತವರ ವಿರುದ್ಧ ಸುಮೋಟೋ ಕೇಸ್ ದಾಖಲು ಮಾಡಿಕೊಳ್ಳಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪಕ್ಷದ ಹಿತಕ್ಕೆ ಧಕ್ಕೆ ಬರುವ ಹೇಳಿಕೆ ನೀಡಿದರೆ ನೋಟಿಸ್ ಕೊಡಬೇಕಾಗುತ್ತೆ. ಶಿಸ್ತು ಕ್ರಮ ಸಮಿತಿಯಲ್ಲಿ ನಾನು ಇದ್ದೀನಿ, ಕ್ರಮ ತೆಗೆದುಕೊಳ್ಳಬೇಕಾಗುತ್ತೆ. ಹೇಳಿಕೆ ಕೊಟ್ಟಿದ್ದವರಿಗೆ ನೋಟಿಸ್ ಕೊಡುತ್ತೇವೆ. ರೆಹಮಾನ್ ಖಾನ್ ಜೊತೆ ಚರ್ಚೆ ಮಾಡಿದ್ದು, ಕೂಡಲೇ ಸಭೆ ಕರೆದು ನೋಟಿಸ್ ಕೊಡುತ್ತೇವೆ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ. ಮುಖ್ಯಮಂತ್ರಿ ಆಗುವ ಯೋಗ್ಯತೆ ಇರುವ ಹಲವು ನಾಯಕರು ಉತ್ತರ ಕರ್ನಾಟಕದಲ್ಲಿ ಇದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿ ಕಡಿಮೆ ಆಗಿದೆ. ಎರಡುವರೆ ವರ್ಷಗಳ ಬಳಿಕ ಅವಕಾಶ ಸಿಕ್ಕಿದರೆ ಉತ್ತರ ಕರ್ನಾಟಕದವರಿಗೆ ಅವಕಾಶ ನೀಡಲಿ. ಆಗ ಆ ಭಾಗದ ಅಭಿವೃದ್ಧಿಗೆ ಪೂರಕ ಆಗುತ್ತದೆ ಎಂದರು.
ಸರ್ಕಾರಕ್ಕೆ ಮುಂದುವರೆಯುವ ನೈತಿಕತೆ ಇಲ್ಲ: ಬಿಹಾರದಲ್ಲಿ ಕೊರೊನಾ ಖಾಯಿಲೆಗೆ ಉಚಿತ ಚಿಕಿತ್ಸೆ ನೀಡುತ್ತೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿಕೆ ವಿಚಾರ ಪ್ರಸ್ತಾಪಿಸಿ, ಇದು ಹುಚ್ಚುತನದ ಪರಮಾವಧಿ. ಕೊರೊನಾ ದೇಶದಲ್ಲಿ ಹೆಚ್ಚಾಗಲು ಕಾರಣ ಕೇಂದ್ರ ಸರ್ಕಾರ. ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಮಾಡಲು, ಮೋದಿ ಸ್ವಾಗತಿಸಲು ಜನ ಸೇರಿಸಿದ್ರು. ಲಾಕ್ ಡೌನ್ ಮೊದಲೇ ಮಾಡಲಿಲ್ಲ. ವಿದೇಶದಿಂದ ಬರುವವರನ್ನ ಕ್ವಾರಂಟೈನ್ ಮಾಡದೇ ಒಳಗೆ ಬಿಟ್ಟರು. ಇದು ದೇಶದಲ್ಲಿ ಕೊರೊನಾ ಹೆಚ್ಚಾಗಲು ಕಾರಣವಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದುವರೆಯಲು ನೈತಿಕತೆ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.