ಬೆಂಗಳೂರು: ವಿಧಾನ ಪರಿಷತ್ನ ಪ್ರಶ್ನೋತ್ತರ ಅವಧಿಯಲ್ಲಿ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.
ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿ 193 ಎ ಗ್ರೇಡ್ ದೇವಸ್ಥಾನಗಳಲ್ಲಿ ಇ ಹುಂಡಿ ಹಾಗೂ ದೇವಸ್ಥಾನಕ್ಕೆ ಬರುವ ಹಣ, ಚಿನ್ನ, ವಸ್ತುಗಳ ಲೆಕ್ಕಹಾಕಲು ಇ ಹುಂಡಿ ಮಾಡುವ ಚಿಂತನೆ ಇದೆ. ಜೊತೆಗೆ ಹೆಚ್ಚಿನ ಆದಾಯ ಬರುವ ಮಹದೇಶ್ವರ ಬೆಟ್ಟ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮುಕಾಂಬಿಕೆ ದೇವಸ್ಥಾನಗಳ ಹಣವನ್ನು ಸಮಾಜಮುಖಿ ಕಾರ್ಯಕ್ರಮಗಳಿಗೆ ಬಳಸಲು ಚಿಂತನೆ ನಡೆಸುತ್ತಿದ್ದೇವೆ ಎಂದು ಜೆಡಿಎಸ್ ಸದಸ್ಯ ಅಪ್ಪಾಜಿಗೌಡ ಅವರ ಪ್ರಶ್ನೆಗೆ ಉತ್ತರಿಸಿದರು.
ಹಕ್ಕುಚ್ಯುತಿ ಮಂಡನೆ:
ಪರಿಷತ್ ಸದಸ್ಯರನ್ನು ಅಧಿಕಾರಿಗಳು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಸದಸ್ಯರು ಒಕ್ಕೋರಲಿನ ಆರೋಪ ಮಾಡಿದರು. ಅಧಿಕಾರಿಗಳನ್ನು ಸದನಕ್ಕೆ ಕರೆಯಿಸಿ ವಾಗ್ದಂಡನೆ ನೀಡಿ ಎಂದು ಒತ್ತಾಯಿಸಿದರು. ಈ ವೇಳೆ ಹಕ್ಕುಚ್ಯುತಿಯನ್ನು ವಿಧಾನ ಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮಂಡಿಸಿದರು. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ನಡೆಯುವ ಕೇಂದ್ರ ಸರ್ಕಾರದ ಯಾವುದೇ ಕಾರ್ಯಕ್ರಮಕ್ಕೂ ನನ್ನನ್ನು ಕರೆಯುವುದಿಲ್ಲ, ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕುವುದಿಲ್ಲ ಎಂದು ಹೊರಟ್ಟಿ ಹಕ್ಕು ಚ್ಯುತಿ ಮಂಡಿಸಿದ್ರು. ಇದಕ್ಕೆ ಉಳಿದ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.
ಪರಿಷತ್ ಸದಸ್ಯರನ್ನು ಶಾಸಕರು ಎಂದು ಪರಿಗಣಿಸುವುದಿಲ್ಲ, ಜನರಿಂದ ಆಯ್ಕೆಯಾದವರು ಮಾತ್ರ ಶಾಸಕರು ಎಂಬ ಮನೋಭಾವನೆ ಅಧಿಕಾರಿಗಳಲ್ಲಿದೆ. ಪರಿಷತ್ ಸದಸ್ಯರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ರೀತಿಯ ವರ್ತನೆ ಅಧಿಕಾರಿಗಳದ್ದು ಎಂದು ತಮ್ಮ ಅಸಮಧಾನ ಹೊರಹಾಕಿದ ಪರಿಷತ್ ಸದಸ್ಯರು, ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಒತ್ತಾಯಿಸಿದರು.
ಹಕ್ಕುಬಾದ್ಯತಾ ಸಮಿತಿಗೆ ವಹಿಸಿದ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ಪರಿಷತ್ ಕಲಾಪವನ್ನು ಗುರುವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿದರು.