ಕಲಬುರಗಿ: ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಸರ್ಕಾರ ಪತನಕ್ಕೆ ಬಿಜೆಪಿಯ ಕುತಂತ್ರ ಕಾರಣ ಅನ್ನೋದು ಎಲ್ಲರಿಗೂ ಗೊತ್ತಿದೆ. ಮಹಾರಾಷ್ಟ್ರ ಒಂದೇ ಅಲ್ಲ, ಬಹುತೇಕ ಕಡೆ ಕುತಂತ್ರದಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮೈತ್ರಿಕೂಟ ಜನರಿಂದ ಅಧಿಕಾರ ಕಳೆದುಕೊಂಡಿಲ್ಲ. ಬಿಜೆಪಿಯ ಕುತಂತ್ರದಿಂದ ಅಧಿಕಾರ ಕಳೆದುಕೊಂಡಿದೆ. ಇದು ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಹೊಡೆತವಾಗಲಿದೆ. ಮೋದಿಯವರಿಗೆ ಲೋಕಸಭೆಯಲ್ಲಿ 330ಕ್ಕಿಂತ ಹೆಚ್ಚು ಸ್ಥಾನ ಬಂದಿದ್ದರೂ ಮತ್ತು ಅನೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೂ ತೃಪ್ತಿಯಿಲ್ಲ ಎಂದರು.
ಪಕ್ಷಾಂತರ ನಿಷೇಧ ಕಾಯ್ದೆ ಕಠಿಣವಾಗಬೇಕು: ಶಾಸಕರನ್ನು ಪಕ್ಷಾಂತರಗೊಳಿಸುವ ಕೆಲಸ ಮಾಡಬಾರದು ಇಂದಿಲ್ಲ. ಈ ನಿಟ್ಟಿನಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಕಠಿಣ ಮಾದರಿಯಲ್ಲಿ ಹೊರತರಬೇಕಿದೆ. ಇದು ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ಮಾಡಬೇಕಾದ ಕೆಲಸ ಎಂದು ಖರ್ಗೆ ತಿಳಿಸಿದರು.
ಇದನ್ನೂ ಓದಿ: Explained: ಅರುಣಾಚಲದಿಂದ ಮಹಾರಾಷ್ಟ್ರ.. ಏಳು ರಾಜ್ಯಗಳಲ್ಲಿ ಬಿಜೆಪಿ ಪಾರುಪತ್ಯದ ಪಯಣ
ಕನ್ಹಯ್ಯ ಲಾಲ್ ಹತ್ಯೆ: ರಾಜಸ್ಥಾನದ ಕನ್ಹಯ್ಯ ಲಾಲ್ ಹತ್ಯೆ ಘಟನೆ ನಾವೆಲ್ಲರೂ ತೀವ್ರವಾಗಿ ಖಂಡಿಸಿದ್ದೇವೆ. ಯಾರೇ ತಪ್ಪು ಮಾಡಲಿ, ಯಾವ ಪಂಗಡದವನೇ ಆಗಿರಲಿ. ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆ ಕೊಡಲೇಬೇಕೆಂದು ಹೇಳಿದರು.
ಆರೋಪಿಗಳಿಗೆ ಪಾಕಿಸ್ಥಾನದ ಜೊತೆ ನಂಟಿದೆ ಎಂಬ ಕುರಿತು ಪ್ರತಿಕ್ರಿಯಿಸಿದ ಖರ್ಗೆ, ಇಂತಹ ವಿಷಯ ಮಾತಾಡಿ ಅಂದರೆ ಪ್ರಧಾನಿ ಮೋದಿ ಬಾಯಿನೇ ತೆರೆಯಂಗಿಲ್ಲ. ಆದರೆ, ಕಾಂಗ್ರೆಸ್ ಬಗ್ಗೆ ವಿದೇಶದಲ್ಲಿ ಮೋದಿ ಮಾತಾಡ್ತಾರೆ ಎಂದು ಟೀಕಿಸಿದರು.
ಇದನ್ನೂ ಓದಿ: 'ಅಮಿತ್ ಶಾ ಈ ಕೆಲಸ ಮೊದಲೇ ಮಾಡಿದ್ದರೆ, ಶಿವಸೇನೆ ಅಧಿಕೃತವಾಗಿ ನಿಮ್ಮೊಂದಿಗಿರುತ್ತಿತ್ತು'