ಬೆಂಗಳೂರು: ಅಭಿವೃದ್ಧಿ ಕಾರ್ಯಕ್ಕೆ ಕಡಿಮೆ ಪ್ರಮಾಣದ ಹಣ ಉಳಿಯುವುದರಿಂದ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳಾಗುವುದಿಲ್ಲ ಎಂದು ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಕರ್ನಾಟಕ ವಿಧಾನಮಂಡಲ ಮತ್ತು ನವದೆಹಲಿಯ ಪಿಆರ್ಎಸ್ ಶಾಸನ ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ವಿಕಾಸಸೌಧದಲ್ಲಿ ಇಂದು ಆಯೋಜಿಸಿದ್ದ "ಆಯವ್ಯಯ ಮತ್ತು ರಾಜ್ಯ ಹಣಕಾಸು" ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲೆಲ್ಲಿ ದುಂದುವೆಚ್ಚವಾಗುತ್ತದೆಯೋ ಅಲ್ಲಿ ಅದನ್ನು ಯಾವ ರೀತಿ ಕಡಿಮೆ ಮಾಡಬೇಕು ಎಂಬ ಅಂಶಗಳನ್ನು ಇಂತಹ ಕಾರ್ಯಾಗಾರಗಳ ಮೂಲಕ ಪರಿಣಿತರಿಂದ ತಿಳಿಯಬಹುದು. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆಯಾಗಿ ಹಿನ್ನಡೆ ಉಂಟಾಗಲಿದೆ ಎಂದರು.
ರಾಜ್ಯ ಸರ್ಕಾರದ ಆದಾಯದ ಶೇ 60ರಿಂದ 70ರಷ್ಟು ಹಣ ಸಾಲದ ಮೇಲಿನ ಬಡ್ಡಿ, ಸರ್ಕಾರಿ ನೌಕರರ ವೇತನ ಹಾಗೂ ಪಿಂಚಣಿಗೆ ಖರ್ಚಾಗುತ್ತಿದೆ. ಜನರ ಅಪೇಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ. ಕಾಯ್ದೆ ರಚಿಸುವುದು, ಬಜೆಟ್‌ಗೆ ಅನುಮೋದನೆ ನೀಡುವುದು ಶಾಸಕರ ಪರಮಾಧಿಕಾರವಾಗಿದ್ದು, ಆಡಳಿತ ನಡೆಸುವ ಜವಾಬ್ದಾರಿಯೂ ಜನಪ್ರತಿನಿಧಿಗಳದ್ದೇ ಆಗಿದೆ. ಈ ಕಾರ್ಯದಲ್ಲಿ ಎಷ್ಟರ ಮಟ್ಟಿಗೆ ತೊಡಗಿಸಿಕೊಂಡು ನಮ್ಮ ಶಕ್ತಿಯನ್ನು ಇನ್ನಷ್ಟು ವಿಶಾಲಗೊಳಿಸಿಕೊಳ್ಳಬಹುದು ಎಂಬುದನ್ನು ಇಂತಹ ಕಾರ್ಯಾಗಾರದಿಂದ ತಿಳಿದುಕೊಳ್ಳಬಹುದಾಗಿದೆ ಎಂದರು.
ಹನ್ನೆರಡನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಶರಣರು ನೀಡಿದರು. ಮೈಸೂರು ಅರಸರ ಕಾಲದಲ್ಲೇ ಪ್ರಜಾಪ್ರಭುತ್ವ ಪ್ರತಿನಿಧಿ ಜಾರಿಗೆ ಬಂದಿತ್ತು. 1907ರಲ್ಲಿ ವಿಧಾನಪರಿಷತ್ ಪ್ರಾರಂಭವಾಗಿದೆ. ಈ ರೀತಿಯ ಹಿನ್ನೆಲೆಯಿರುವ ನಮ್ಮ ರಾಜ್ಯ ಇತರೆ ರಾಜ್ಯಗಳಿಗಿಂತ ಮಾದರಿಯಾಗಬೇಕು. ನಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಣೆ ಮಾಡಲು ಪರಿಣಿತರ ಮಾರ್ಗದರ್ಶನ, ಸಲಹೆ ಅಗತ್ಯ ಎಂದರು.
ಶಾಸನ ರಚನೆ ಮಾಡಲು ನಮ್ಮ ಚಿಂತನೆ ವಿಶಾಲವಾಗಬೇಕು. ಅದಕ್ಕಾಗಿ ತಜ್ಞರ ಅನುಭವ ಆಧರಿಸಿ ಕಾಯ್ದೆ ರಚಿಸಬೇಕಾಗುತ್ತದೆ. ವಿಧಾನ ಮಂಡಲದಲ್ಲಿ ಸಂಶೋಧನೆ, ಗ್ರಂಥಾಲಯವಿದ್ದರೂ ದೇಶ ಹಾಗೂ ರಾಜ್ಯದ ವ್ಯವಸ್ಥೆ ಬಗ್ಗೆ ವಿಶ್ಲೇಷಣೆ ಮಾಡುವಷ್ಟು ಸಿಬ್ಬಂದಿ ಇಲ್ಲ. ಇಂದಿನ ಕಾರ್ಯಾಗಾರಕ್ಕೆ ಶಾಸಕರು ಕಡಿಮೆ ಸಂಖ್ಯೆಯಲ್ಲಿ ಬಂದಿದ್ದಾರೆ ಎಂಬ ಭಾವನೆ ಬೇಡ. ಹಲವು ಬೋಗಿಗಳು ಇರುವ ರೈಲಿಗೆ ಇಂಜಿನ್ ಇರುವುದು ಒಂದೇ. ಮುಂದಿನ ದಿನಗಳಲ್ಲಿ ಹೆಚ್ಚು ಶಾಸಕರು ಬರುವಂತೆ ಈ ಕಾರ್ಯಾಗಾರ ನಡೆಯಲಿ. ಪಿಆರ್ಎಸ್ ಶಾಸನ ಸಂಶೋಧನಾ ಸಂಸ್ಥೆ ಕಳೆದ 16 ವರ್ಷಗಳಿಂದ ದೇಶದಲ್ಲಿ ಆಡಳಿತಗಾರರಿಗೆ ನೀತಿ ರೂಪಿಸಲು ಅಗತ್ಯ ಮಾಹಿತಿ ಸಂಗ್ರಹಿಸಿ ವಿಶ್ಲೇಷಣೆ ಮಾಡುತ್ತಿದೆ. ಯಾವುದೇ ಲಾಭದ ಉದ್ದೇಶವಿಲ್ಲದೆ ಈ ಸಂಸ್ಥೆ ಶಿಕ್ಷಣ ನೀಡುವ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಓದಿ:ರಮೇಶ್ ರಾಜೀನಾಮೆಯಿಂದ ತೆರವಾದ ಸಚಿವ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ: ಬಾಲಚಂದ್ರ ಜಾರಕಿಹೊಳಿ
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ವಿಧಾನಸಭೆ ಮತ್ತು ವಿಧಾನಪರಿಷತ್ ಸದನಗಳು ಸುಸೂತ್ರವಾಗಿ ನಡೆಯಬೇಕು. ಕಾರ್ಯ ಕಲಾಪ ಪಟ್ಟಿಯಂತೆ ಕಲಾಪಗಳು ನಡೆಯಬೇಕು. ಆ ನಿಟ್ಟಿನಲ್ಲಿ ಶಾಸಕರಿಗೆ ಅನುಕೂಲವಾಗುವಂತೆ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಹೇಳಿದರು.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಶಾಸಕರು ಸರ್ಕಾರಕ್ಕೆ ಸಲಹೆ ನೀಡುವ ಮೂಲಕ ಬೆಳಕು ಚೆಲ್ಲಬೇಕು. ಸಭಾಧ್ಯಕ್ಷರೊಂದಿಗೆ ಚರ್ಚಿಸಿ ಕೆಲವೊಂದು ತಂಡವನ್ನು ರಚನೆ ಮಾಡುತ್ತೇವೆ. ಆ ತಂಡದ ನಾಯಕರಿಗೆ ತರಬೇತಿ ನೀಡಲಾಗುವುದು. ಬಜೆಟ್ ಮತ್ತು ರಾಜ್ಯಪಾಲರ ಭಾಷಣ ಸೇರಿದಂತೆ ಯಾವ ರೀತಿ ಕಲಾಪ ನಡೆಯಬೇಕು ಎಂಬ ಬಗ್ಗೆ ತರಬೇತಿ ನೀಡಲಾಗುವುದು. ಮಾದರಿಯಾಗುವ ರೀತಿಯಲ್ಲಿ ಕಲಾಪಗಳು ನಡೆಯಬೇಕೆಂಬುದು ನಮ್ಮ ಉದ್ದೇಶ ಎಂದರು.