ಬೆಂಗಳೂರು : ನಾಡಿನ ಹೆಮ್ಮೆಯ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಂದು ಸಂಜೆ ನನಗಾಗಿ ಪರಿಷತ್ತಿನಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಆದರೇ, ಅನಾರೋಗ್ಯದ ಕಾರಣದಿಂದ ಸಮಾರಂಭಕ್ಕೆ ಹಾಜರಾಗುತ್ತಿಲ್ಲದಿರುವುದಕ್ಕೆ ವೈಯಕ್ತಿಕವಾಗಿ ನನಗೆ ಬಹಳ ನೋವಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೊಂಚ ಮಟ್ಟಿಗೆ ಅನಾರೋಗ್ಯ ಉಂಟಾಗಿ ದೇಹದಲ್ಲಿ ತುಸು ನಿತ್ರಾಣವಿದೆ. ವೈದ್ಯರು ಮನೆಯಲ್ಲಿಯೇ ವಿಶ್ರಾಂತಿ ಪಡೆಯುವಂತೆ ಸಲಹೆ ಮಾಡಿದ್ದಾರೆ. ಆದರೆ, ಈ ಕಾರ್ಯಕ್ರಮ ಪೂರ್ವನಿಗದಿಯಾಗಿರುವ ಕಾರಣಕ್ಕೆ ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ಎಂ.ಎನ್. ವೆಂಕಟಾಚಲಯ್ಯ ಅವರು ಹಾಗೂ ಪರಿಷತ್ ಅಧ್ಯಕ್ಷರು, ನಾಡೋಜ ಡಾ. ಮಹೇಶ್ ಜೋಶಿ ಅವರು ನನ್ನ ಸ್ವಗೃಹಕ್ಕೆ ಆಗಮಿಸಿ ಪ್ರಶಸ್ತಿ ಪ್ರದಾನ ಮಾಡುವುದಾಗಿ ತಿಳಿಸಿದ್ದಾರೆ.
ಇವರ ಪ್ರೀತಿ, ವಿಶ್ವಾಸಕ್ಕೆ ನಾನು ಕೃತಜ್ಞನಾಗಿದ್ದೇನೆ. ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನ ಪ್ರಶಸ್ತಿ ಸ್ವೀಕರಿಸುವುದು ಮಹಾನ್ ಭಾಗ್ಯ ಎಂದೇ ನಾನು ಭಾವಿಸಿದ್ದೇನೆ ಎಂದಿದ್ದಾರೆ.
ಹಾಸನಾಂಬೆ ದರ್ಶನ ಪಡೆದಿದ್ದ ಹೆಚ್ ಡಿ ದೇವೇಗೌಡರು : ಇತ್ತೀಚೆಗೆ ಹಾಸನ ನಗರದ ಅಧಿದೇವತೆ ಹಾಸನಾಂಬೆ ದೇವಾಲಯಕ್ಕೆ ಹೆಚ್ ಡಿ ದೇವೇಗೌಡ ಹಾಗೂ ಪತ್ನಿ ಚನ್ನಮ್ಮ ಅವರು ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದರು. ನವೆಂಬರ್ 4 ರಂದು ಶುಕ್ರವಾರ ದೇವಾಲಯಕ್ಕೆ ಆಗಮಿಸಿದ ಮಾಜಿ ಪ್ರಧಾನಿ ಅವರ ಕುಟುಂಬವನ್ನು ದೇವಾಯಲದ ಅಧಿಕಾರಿಗಳು ಬರಮಾಡಿಕೊಂಡಿದ್ದರು. ವ್ಹೀಲ್ ಚೇರ್ನಲ್ಲಿ ಆಗಮಿಸಿ ಹಾಸನಾಂಬೆ ದೇವಾಲಯಕ್ಕೆ ತೆರಳಿದ್ದ ದೊಡ್ಡಗೌಡರು, ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.
ನಂತರ ದರ್ಬಾರ್ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ ಅವರು, ಸಿದ್ದೇಶ್ವರ ದೇಗುಲದಲ್ಲಿ ಪೂಜೆ ನೆರವೇರಿಸಿದ್ದರು. ಅರೋಗ್ಯ ಕರುಣಿಸು ತಾಯಿ, ಮುಂದಿನ ಬಾರಿ ನಡೆದುಕೊಂಡು ಬರುವಷ್ಟು ಶಕ್ತಿ ಕೊಡು ಹಾಸನಾಂಬೆ ಸನ್ನಿಧಿಯಲ್ಲಿ ಪ್ರಾರ್ಥಿಸಿದ್ದರು. ಇದೇ ವೇಳೆ ಜಿಲ್ಲಾಡಳಿತ ಅಚ್ಚುಕಟ್ಟಾಗಿ ದೇವಿ ದರ್ಶನಕ್ಕೆ ವ್ಯವಸ್ಥೆ ಮಾಡಿದೆ. ಜಿಲ್ಲಾಧಿಕಾರಿಗಳು ಹಾಗೂ ಅವರ ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ : ಮುಂದಿನ ವರ್ಷ ನಡೆದುಕೊಂಡು ಬರುವಷ್ಟು ಶಕ್ತಿ ಕೊಡು ತಾಯಿ.. ಹಾಸನಾಂಬೆಗೆ ದೇವೇಗೌಡರ ಪ್ರಾರ್ಥನೆ