ಬೆಂಗಳೂರು: ನಿರೀಕ್ಷಿತವೂ ಅನಿರೀಕ್ಷಿತವೋ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಹೊಸಮುಖಗಳಿಗೆ ಮಣೆ ಹಾಕಿದೆ. ಅಭ್ಯರ್ಥಿಗಳು ಇಂದು ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆ ಪಕ್ಷದ ನಾಯಕರ ಸೂಚನೆ ಮೇರೆಗೆ ಅಗತ್ಯ ದಾಖಲೆಗಳೊಂದಿಗೆ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ ಬೆಂಗಳೂರಿಗೆ ಆಗಮಿಸಿದರು. ಬೆಳಗ್ಗೆಯೇ ಬಿಜೆಪಿ ಕಚೇರಿಗೆ ಆಗಮಿಸಿ ಬಿಜೆಪಿ ಸಂಪ್ರದಾಯದಂತೆ ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. ನಂತರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಂದ ಬಿ ಫಾರಂ ಪಡೆದುಕೊಂಡರು.
ಟಿಕೇಟ್ ಆಕಾಂಕ್ಷಿಯಾಗಿದ್ದ ಹಾಲಿ ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಅಭ್ಯರ್ಥಿಗಳಿಗೆ ಶುಭಕೋರಿದರು. ತಮಗೆ ಯಾವುದೇ ಅಸಮಾಧಾನ ಆಗಿಲ್ಲ. ಪಕ್ಷ ನನಗೆ ಕೊಡಬೇಕಾದ ಗೌರವ ಕೊಟ್ಟಿದೆ, ಇನ್ಮುಂದೆ ಪಕ್ಷದ ಕೆಲಸ ಮಾಡಿಕೊಂಡಿರುತ್ತೇನೆ ಎಂದರು.
ಪಕ್ಷ ತಮ್ಮನ್ನು ಗುರುತಿಸಿ ಅವಕಾಶ ಕಲ್ಪಿಸಿರುವುದಕ್ಕೆ ಬಿಜೆಪಿ ಅಭ್ಯರ್ಥಿಗಳು ಖುಷಿಯಾಗಿದ್ದಾರೆ. ಪಕ್ಷದ ನಂಬಿಕೆ ಹುಸಿಯಾಗದಂತೆ ಕೆಲಸ ಮಾಡುತ್ತೇವೆ ಎಂದು ನಾಮಪತ್ರ ಸಲ್ಲಿಕೆಗೂ ಮೊದಲು ಭರವಸೆ ನೀಡಿದರು.
ಇನ್ನು ಬಿ ಫಾರಂ ಹಿಡಿದ ಅಭ್ಯರ್ಥಿಗಳು ನೇರವಾಗಿ ವಿಧಾನಸೌಧಕ್ಕೆ ತೆರಳಿದರು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಜೊತೆ ಚುನಾವಣಾಧಿಕಾರಿ ಎಂ ಕೆ ವಿಶಾಲಾಕ್ಷಿ ಅವರ ಕಚೇರಿಗೆ ತೆರಳಿ ಮೂರು ಪ್ರತಿಯಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.