ಬೆಂಗಳೂರು: ಮೇ 10 ರಂದು ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ನಾಳೆ ಅಧಿಸೂಚನೆ ಹೊರಬೀಳಲಿದೆ. ನಾಳೆಯಿಂದಲೇ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯೂ ಆರಂಭವಾಗಲಿದ್ದು, ಚುನಾವಣೆಯ ಕಾವು ಅಧಿಕೃತವಾಗಿ ಆರಂಭವಾಗಲಿದೆ. ರಾಜ್ಯದಲ್ಲಿ ಮೇ 10ರಂದು ಮತದಾನ ಮತ್ತು ಮೇ 13ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. ನಾಳೆಯಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. ಆಯಾ ಜಿಲ್ಲಾಧಿಕಾರಿಗಳು ಅಧಿಸೂಚನೆ ಪ್ರಕಟಿಸಲಿದ್ದಾರೆ. ಏಪ್ರಿಲ್ 21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 24 ರಂದು ಕೊನೆಯ ದಿನವಾಗಿದೆ.
ಚುನಾವಣಾ ಆಯೋಗ ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ಚುನಾವಣೆ ನಡೆಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ರಾಜಕೀಯ ಪಕ್ಷಗಳು ಈಗಾಗಲೇ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆಸುತ್ತಿವೆ. ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ 124 ಮಂದಿ ಹಾಗೂ ಎರಡನೇ ಪಟ್ಟಿಯಲ್ಲಿ 42 ಅಭ್ಯರ್ಥಿಗಳನ್ನು ಪ್ರಕಟಿಸಿದೆ.
ಜೆಡಿಎಸ್ ಮೊದಲ ಪಟ್ಟಿಯಲ್ಲಿ 92 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಎರಡನೇ ಪಟ್ಟಿ ಬಿಡುಗಡೆಯ ಹಂತದಲ್ಲಿದೆ. ಇನ್ನು ಬಿಜೆಪಿ ತೀವ್ರ ಕಸರತ್ತಿನ ಬಳಿಕ ಮಂಗಳವಾರ ರಾತ್ರಿ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಈಗಾಗಲೇ ಘೋಷಿಸಿರುವ ಅಭ್ಯರ್ಥಿಗಳು ನಾಳೆಯಿಂದ ನಾಮಪತ್ರ ಸಲ್ಲಿಕೆ ಪ್ರಾರಂಭಿಸಲಿದ್ದಾರೆ.
ಮತದಾರರ ಮಾಹಿತಿ: ರಾಜ್ಯದಲ್ಲಿ ಒಟ್ಟು 5.24 ಕೋಟಿ ಮತದಾರರಿದ್ದು, 2.63 ಕೋಟಿ ಪುರುಷರು ಮತ್ತು 2.60 ಕೊಟಿ ಮಹಿಳೆಯರಿದ್ದಾರೆ. 18-19 ವರ್ಷದೊಳಗಿನ ಯುವ ಮತದಾರರು 9.58 ಲಕ್ಷ ನೋಂದಣಿ ಮಾಡಿಕೊಂಡಿದ್ದು, 80 ವರ್ಷಕ್ಕಿಂತ ಮೇಲ್ಪಟ್ಟ ಮತದಾರರು 12.15 ಲಕ್ಷ ಮಂದಿ ಇದ್ದಾರೆ. 100 ವರ್ಷ ದಾಟಿರುವ 16,976 ಮತದಾರರಿದ್ದಾರೆ. 5.60 ಲಕ್ಷ ವಿಕಲಚೇತನ ಮತದಾರರಿದ್ದು, ಒಂದು ಲಕ್ಷಕ್ಕೂ ಅಧಿಕ ಲೈಂಗಿಕ ಕಾರ್ಯಕರ್ತ ಮತದಾರರಿದ್ದಾರೆ. 41,312 ತೃತೀಯ ಲಿಂಗಿಗಳಿದ್ದು, ಈ ಪೈಕಿ ಮತದಾನಕ್ಕಾಗಿ ಗುರುತಿಸಿಕೊಂಡವರು 4751 ಮಂದಿ ಇದ್ದಾರೆ.
ರಾಜ್ಯದಲ್ಲಿ 224 ವಿಧಾನಸಭಾ ಕ್ಷೇತ್ರಗಳಿದ್ದು, ಎಸ್ಸಿಗೆ 36 ಮತ್ತು ಎಸ್‌ಟಿಗೆ 15 ಮತ್ತು ಉಳಿದ ವಿಧಾನಸಭಾ ಕ್ಷೇತ್ರಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ. ಪ್ರತಿ ಮತಗಟ್ಟೆಗೆ ಸರಾಸರಿ 883 ಮತದಾರರಂತೆ ಒಟ್ಟು 58,282 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನಗರ ಪ್ರದೇಶಗಳಲ್ಲಿ 24,063 ಮತ್ತು ಗ್ರಾಮೀಣ ಪ್ರದೇಶದಲ್ಲಿ 34,219 ಮತಗಟ್ಟೆಗಳು ಇರಲಿವೆ.
ವಿಶೇಷವಾಗಿ 1320 ಮಹಿಳಾ ಮತಗಟ್ಟೆಗಳು, 224 ಯುವ ಅಧಿಕಾರಿಗಳು ನಿರ್ವಹಣೆಯ, 224 ವಿಶೇಷ ಚೇತನರು ಮತ್ತು 240 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ಸುಮಾರು 1200 ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳಾಗಿದ್ದು, ಇವುಗಳ ನಿರ್ವಹಣೆಗೆ ಅಗತ್ಯ ಹೆಚ್ಚಿನ ಭದ್ರತೆಯ ಸೌಲಭ್ಯಗಳನ್ನು ಒದಗಿಸಲಾಗುವುದು. ರಾಜ್ಯದ ಶೇ.50ರಷ್ಟು ಮತಗಟ್ಟೆಗಳು ವೆಬ್‌ಕಾಸ್ಟಿಂಗ್ ಸೌಲಭ್ಯವನ್ನು ಹೊಂದಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇದನ್ನೂ ಓದಿ: ಕೈ ತಪ್ಪಿದ ಬಿಜೆಪಿ ಟಿಕೆಟ್ - ರಾಜೀನಾಮೆಗೆ ಸವದಿ ನಿರ್ಧಾರ.. ನಾಳೆಯೇ ಅಂತಿಮ ತೀರ್ಮಾನ