ಬೆಂಗಳೂರು: ನಾಳೆ ರಾಜ್ಯದ ಯಾವುದೇ ಶಾಲಾ ಕಾಲೇಜುಗಳಿಗೆ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ರಜೆ ಘೋಷಣೆ ಮಾಡಿಲ್ಲ. ಎಂದಿನಂತೆ ಶಾಲಾ ಕಾಲೇಜುಗಳು ನಡೆಯಲಿವೆ ಎಂದು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಆಗ್ರಹಿಸಿ ನಾಳೆ ಕರ್ನಾಟಕ ಬಂದ್ಗೆ ಕೆಲ ಸಂಘಟನೆಗಳು ಕರೆ ಕೊಟ್ಟಿವೆ. ಆದರೆ ಆ ಸಂಘಟನೆಗಳು ಧರಣಿ ನಡೆಸುವ ವೇಳೆಯಲ್ಲಿಯೇ ಸ್ಥಳಕ್ಕೆ ತೆರಳಿ ಅಹವಾಲು ಆಲಿಸಿ ಅವರ ಪರವಾದ ಸರ್ಕಾರದ ನಿಲುವನ್ನು ಘೋಷಣೆ ಮಾಡಿದ್ದೆ ಎಂದರು.
ಅಲ್ಲದೇ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಮುಂದಾಗಿದ್ದು, ಯಾರು ಕನ್ನಡಿಗರು, ಆಯ್ಕೆ ಹೇಗೆ ಎನ್ನುವ ಕುರಿತು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ, ಖಾಸಗಿ ಸಂಸ್ಥೆಗಳಲ್ಲಿಯೂ ಉದ್ಯೋಗ ಮೀಸಲಾತಿಗೆ ಕಾರ್ಮಿಕ ಇಲಾಖೆಯಿಂದ ಕಾಯ್ದೆ ಸಿದ್ದಪಡಿಸಲಾಗುತ್ತಿದೆ ಅವರ ಬೇಡಿಕೆ ಬಹುತೇಕ ಈಡೇರಿಸಿದ್ದು ಇನ್ನೂ ಈಡೇರಿಸುವ ಹೆಜ್ಜೆ ಇಡಲಾಗುತ್ತಿದೆ ಎಂದು ತಿಳಿಸಿದರು.
ಆದರೂ ಬಂದ್ ಕರೆ ನೀಡಲಾಗಿದೆ. ಆದರೆ ನಾಳೆ ಸರ್ಕಾರ ಶಾಲಾ ಕಾಲೇಜಿಗೆ ರಜೆ ಘೋಷಿಸಿಲ್ಲ, ಎಂದಿನಂತೆ ಶಾಲಾ- ಕಾಲೇಜು ಕಾರ್ಯ ನಿರ್ವಹಿಸಲಿವೆ, ಜಿಲ್ಲಾಡಳಿತಗಳು ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು.