ಬೆಂಗಳೂರು : ಸರ್ಕಾರ ಬಿಸಿಯೂಟ ಯೋಜನೆ ಜಾರಿ ಮಾಡಿದ ಬಳಿಕ ಬಡವರ ಮಕ್ಕಳಿಗೆ ಮಧ್ಯಾಹ್ನದ ಊಟಕ್ಕೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಲಾಕ್ಡೌನ್ ಜಾರಿ ಮಾಡಿದ ಬಳಿಕ ಈ ಮಕ್ಕಳಿಗೆ ಕಲಿಯಲು ಶಾಲೆಯೂ ಇಲ್ಲ, ಮಧ್ಯಾಹ್ನದ ಬಿಸಿಯೂಟವೂ ಇಲ್ಲ ಎಂಬಂತಾಗಿದೆ.
2003ರಲ್ಲಿ ರಾಜ್ಯಾದ್ಯಂತ ಬಿಸಿಯೂಟ ಯೋಜನೆ ಜಾರಿಯಾದ ಬಳಿಕ ದುರ್ಬಲ ವರ್ಗದ ಬಡವರು ಮತ್ತು ಕೂಲಿ ಕಾರ್ಮಿಕರ ಮಕ್ಕಳಿಗೆ ಸಾಕಷ್ಟು ಅನುಕೂಲವಾಗಿತ್ತು. ಪ್ರಾಥಮಿಕ ಶಿಕ್ಷಣ ಪಡೆಯುವ ಮಕ್ಕಳ ಸಂಖ್ಯೆ ಹೆಚ್ಚಿಸಬೇಕು ಮತ್ತು ಬಡ ಮಕ್ಕಳಿಗೆ ಪೌಷ್ಠಿಕ ಆಹಾರ ಸಿಗಬೇಕು ಎಂಬ ಆಲೋಚನೆಯಲ್ಲಿ ಸರ್ಕಾರ ಜಾರಿ ಮಾಡಿದ ಈ ದಾಸೋಹ ಬಡ ಮಕ್ಕಳ ಪಾಲಿಗೆ ಅಕ್ಷಯ ಪಾತ್ರೆಯಂತಿತ್ತು. ಯೋಜನೆ 10ನೇ ತರಗತಿವರೆಗೂ ವಿಸ್ತರಿಸಿದಂತೆ ಗ್ರಾಮೀಣ ಭಾಗದಲ್ಲಿ ಕೃಷಿ ಕಾರ್ಮಿಕರು, ನಗರ ಪ್ರದೇಶದಲ್ಲಿ ಕೈಗಾರಿಕೆಗಳು, ಗಾರ್ಮೆಂಟ್ಸ್ ಕಾರ್ಮಿಕರು ಮತ್ತು ಕಟ್ಟಡ ನಿರ್ಮಾಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ದುಡಿಯುವ ಕಾರ್ಮಿಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಆರಂಭಿಸಿದ್ದರು. ಆದರೆ, ಲಾಕ್ಡೌನ್ ಜಾರಿ ಮಾಡಿದ ಬಳಿಕ ಈ ಮಕ್ಕಳಿಗೆ ಶಾಲೆ ಮತ್ತು ಮಧ್ಯಾಹ್ನದ ಊಟ ಎರಡೂ ಕೈತಪ್ಪಿ ಹೋಗಿವೆ. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಜೊತೆಯಲ್ಲೇ ಕೆಲಸದ ಜಾಗಕ್ಕೆ ಕರೆದೊಯ್ಯುವ ಪ್ರಕರಣ ವ್ಯಾಪಕವಾಗಿ ಕಂಡು ಬರುತ್ತಿವೆ.
ಉತ್ತರ ಭಾರತ ಮೂಲದ ಕಾರ್ಮಿಕರು ಲಾಕ್ಡೌನ್ ಬಳಿಕ ರಾಜ್ಯವನ್ನೇ ತೊರೆದಿದ್ದು, ಮಕ್ಕಳ ಸಮೇತ ತಮ್ಮ ಊರುಗಳಿಗೆ ಹೊರಟು ಹೋಗಿದ್ದಾರೆ. ಈ ಮಕ್ಕಳು ಮತ್ತೆ ಇಲ್ಲಿನ ಶಾಲೆಗಳಿಗೆ ಬರುತ್ತಾರಾ ಎಂಬ ಪ್ರಶ್ನೆ ಶಿಕ್ಷಣ ಇಲಾಖೆಯನ್ನೂ ಕಾಡುತ್ತಿದೆ. ಪಕ್ಕದ ಆಂಧ್ರ, ತಮಿಳುನಾಡಿನ ಕಾರ್ಮಿಕರ ಮಕ್ಕಳು ಬರುವ ನಿರೀಕ್ಷೆ ಇದ್ದರೂ ಖಾತರಿ ಇಲ್ಲ. ಹೀಗೆ ಶಾಲೆ ಮತ್ತು ಮಧ್ಯಾಹ್ನದ ಬಿಸಿಯೂಟ ನಿಂತು ಹೋಗಿರುವುದರಿಂದ ಮಕ್ಕಳು ಕಲಿಕೆ ಮತ್ತು ಪೌಷ್ಠಿಕ ಆಹಾರದಿಂದಲೂ ವಂಚಿತರಾಗುತ್ತಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ 1 ರಿಂದ 10ನೇ ತರಗತಿವರೆಗೆ 53 ಸಾವಿರ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿವೆ. 56 ಲಕ್ಷ ವಿದ್ಯಾರ್ಥಿಗಳಿಗೆ ಬಿಸಿಯೂಟ ಯೋಜನೆಯ ಅನುಕೂಲ ಸಿಗುತ್ತಿತ್ತು. ಇದಕ್ಕಾಗಿ ರಾಜ್ಯಾದ್ಯಂತ ಒಟ್ಟು 39 ಸಾವಿರ ಅಡುಗೆ ಮನೆಗಳಲ್ಲಿ ಬಿಸಿಯೂಟ ಸಿದ್ದವಾಗುತ್ತಿತ್ತು. ಲಾಕ್ಡೌನ್ ಬಳಿಕ ಬಿಸಿಯೂಟದ ಅಡುಗೆ ಕೋಣೆಗಳು ಬೀಗ ಹಾಕಿವೆ. ಮಧ್ಯಾಹ್ನದ ಬಿಸಿಯೂಟ ನಂಬಿಕೊಂಡು ಶಾಲೆಗೆ ಬರುತ್ತಿದ್ದ ಮಕ್ಕಳು ಹೊಲಕ್ಕೆ, ಕೂಲಿ ಕೆಲಸಕ್ಕೆ ಹೋಗುವಂತಾಗಿದೆ. ಕಳೆದ ವರ್ಷ ರಾಜ್ಯ ಸರ್ಕಾರ ಹೈಕೋರ್ಟ್ಗೆ ಸಲ್ಲಿಸಿದ್ದ ವರದಿ ಪ್ರಕಾರ ರಾಜ್ಯದಲ್ಲಿ 70 ಸಾವಿರಕ್ಕೂ ಅಧಿಕ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.
ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಬಿಸಿಯೂಟ ಕೊಟ್ಟರೂ ಈ ಮಕ್ಕಳು ಶಾಲೆಗೆ ಬರುವ ಮನಸ್ಸು ಮಾಡಿರಲಿಲ್ಲ. ಈ ಸಂಖ್ಯೆಯನ್ನು ಕಡಿಮೆ ಮಾಡಲು ಸರ್ಕಾರ ಮತ್ತು ಅಧಿಕಾರಿಗಳು ಪ್ರಯತ್ನಿಸಬೇಕು ಎಂಬ ಹೊತ್ತಲ್ಲೇ ಕೊರೊನಾ ಮಹಾಮಾರಿ ವಕ್ಕರಿಸಿದೆ. ಸದ್ಯಕ್ಕೆ ಶಾಲೆಗಳು ತೆರಯುವ ಲಕ್ಷಗಳೂ ಇಲ್ಲ. ಹೀಗಾಗಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಶಿಕ್ಷಣ ಇಲಾಖೆಯನ್ನು ಕಾಡುತ್ತಿದೆ.