ಬೆಂಗಳೂರು: ನಗರದಲ್ಲಿ ಇನ್ಮುಂದೆ ಯಾವುದೇ ಭಾಗದಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದರೆ, ಆ ವ್ಯಕ್ತಿಯ ಮನೆಯ ಎದುರಿನ 100 ಮೀಟರ್ ರಸ್ತೆಯನ್ನು ಸೀಲ್ ಡೌನ್ ಮಾಡುವ ಪದ್ಧತಿಯನ್ನು ಬಿಬಿಎಂಪಿ ಕೈಬಿಟ್ಟಿದೆ.
ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಸಾಕಷ್ಟು ಸೀಲ್ ಡೌನ್ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. 580 ಕ್ಕೂ ಹೆಚ್ಚು ಸ್ಥಳೀಯ ಕ್ಷೇಮಾಭಿವೃದ್ಧಿ ಸಂಘಗಳ ಜೊತೆ ಸಭೆ ಮಾಡಿದಾಗ, ಒಂದೊಂದು ಕೊರೊನಾ ಪ್ರಕರಣ ಇದ್ದಲ್ಲಿ ಸೀಲ್ ಡೌನ್ ಮಾಡುವುದು ಸಮಂಜಸವಲ್ಲ ಎಂಬ ಅನಿಸಿಕೆಗಳು ವ್ಯಕ್ತವಾಗಿವೆ ಎಂದರು.
ನೂರು ಮೀಟರ್ ಒಳಗೆ ಮೂರು ಹಾಗೂ ಮೂರಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾದರೇ ಮಾತ್ರ ಕಂಟೇನ್ಮೆಂಟ್ ಮಾಡಲಾಗುವುದು. ಇಲ್ಲದಿದ್ದರೆ ಸೀಲ್ ಡೌನ್ ಮಾಡುವುದಿಲ್ಲ. ಸೋಂಕಿತರ ಮನೆಯ ಮುಂದೆ ಪೋಸ್ಟರ್ ಅಂಟಿಸಿ, ಅಕ್ಕಪಕ್ಕದವರಿಗೆ ತಿಳುವಳಿಕೆ ಮೂಡಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸೀಲ್ಡೌನ್ ಮಾಡುವುದರಿಂದ ರಸ್ತೆಗೆ ಬ್ಯಾರಿಕೇಡ್, ತಗಡಿನ ಶೀಟ್ ಅಥವಾ ಮರಗಳನ್ನು ರಸ್ತೆಗಳಿಗೆ ಅಡ್ಡ ಹಾಕುವುದರಿಂದ ರೋಗಿಗಳು ಹಾಗೂ ಕುಟುಂಬಸ್ಥರು ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಸುತ್ತಲಿನ ಮನೆಯವರಿಗೂ ಅನಾನುಕೂಲ ಆಗಲಿದೆ. ಈ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನಲೆ ಸರ್ಕಾರದ ಒಪ್ಪಿಗೆಯನ್ನೂ ಪಡೆದು ಬಿಬಿಎಂಪಿ ಸೀಲ್ ಡೌನ್ ಮಾಡದೇ ಇರಲು ನಿರ್ಧರಿಸಿದೆ ಎಂದು ಅವರು ತಿಳಿಸಿದರು.