ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವ ಪ್ರಶ್ನೆಯೇ ಇಲ್ಲ. ಗಾಂಧಿ ಹೆಸರನ್ನು ಇಲ್ಲಿಯವರೆಗೂ ದುರುಪಯೋಗಪಡಿಸಿಕೊಂಡು ಬಂದವರೇ, ಇಂದು ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದ್ದಾರೆ ಎಂದು ಕಾಂಗ್ರೆಸ್ ಹೋರಾಟಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದರು.
ಕಾಂಗ್ರೆಸ್ ಜನರ ಕ್ಷಮೆ ಕೇಳಬೇಕು: ಪಿಎಸ್ಐ ನೇಮಕಾತಿ ಪ್ರಕರಣದಲ್ಲಿ ಈ ಹಿಂದೆಯೂ ಆರೋಪ ಕೇಳಿ ಬಂದಿತ್ತು. ಆಗ ಕಾಂಗ್ರೆಸ್ ಸರ್ಕಾರ ಯಾವುದೇ ತನಿಖೆ ಮಾಡಿಲ್ಲ, ಈಗ ನಾವು ಬಂದ ನಂತರ ತನಿಖೆ ಮಾಡಿಸುತ್ತಿದ್ದೇನೆ. ನಿಜವಾಗಿಯೂ ಜನರ ಕ್ಷಮೆಯನ್ನು ಕಾಂಗ್ರೆಸ್ ಕೇಳಬೇಕು, ನಾವು ಹಿಂದೆ ತನಿಖೆ ಮಾಡಿಸುವ ಕೆಲಸ ಮಾಡಲಿಲ್ಲ. ಈಗ ಬಿಜೆಪಿ ಮಾಡುತ್ತಿದೆ ಎಂದು ಕ್ಷಮೆ ಕೇಳಬೇಕು ಎಂದು ಹೇಳಿದರು.
ಅಪರಾಧಗಳನ್ನು ಮುಚ್ಚಿ ಹಾಕಿದ್ದ ಕಾಂಗ್ರೆಸ್: ನಾವು ಅಕ್ರಮ ಆರೋಪ ಪ್ರಕರಣದಲ್ಲಿ ಉನ್ನತ ಅಧಿಕಾರಿಗಳನ್ನು ಬಂಧಿಸಿದ್ದೇವೆ. ಈಗ ಕಾಂಗ್ರೆಸ್ನವರಿಗೆ ತಾವು ಮಾಡಿದ ತಪ್ಪಿನ ಅರಿವಾಗಬೇಕು. ಹಿಂದೆ ಕಾಂಗ್ರೆಸ್ನವರು ಪಕ್ಷಪಾತ ಮಾಡಿ, ಅಪರಾಧಗಳನ್ನು ಮುಚ್ಚಿ ಹಾಕಿ, ಹಗರಣಗಳನ್ನು ಮುಚ್ಚಿ ಹಾಕಿ, ಅಪರಾಧಿ ಸ್ಥಾನದಲ್ಲಿದ್ದಾರೆ. ಹೀಗಾಗಿ ಅವರು ಪಾಠ ಕಲಿಯಬೇಕೇ ಹೊರತು ಇನ್ನೊಬ್ಬರಿಗೆ ಪಾಠ ಹೇಳುವ ಅಧಿಕಾರ ಅವರಿಗಿಲ್ಲ ಎಂದರು.
ಹಿಂದೆ ಕೆಪಿಎಸ್ಸಿ ಪರೀಕ್ಷೆಯಲ್ಲಿ ಪತ್ರಿಕೆ ಬಹಿರಂಗವಾಗಿತ್ತು. ಅದರಲ್ಲಿ ಅಧಿಕಾರಿಗಳ ಕ್ರಮಕ್ಕೆ ನ್ಯಾಯಾಲಯ ತೀರ್ಪು ನೀಡಿತ್ತು. ಆದರೆ ಯಾರನ್ನು ಅವರು ಅಮಾನತು ಮಾಡಿರಲಿಲ್ಲ. ನಾನು ಗೃಹ ಸಚಿವನಾದ ನಂತರ ಅಮಾನತು ಮಾಡಿದ್ದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಕರಣದ ದಾರಿ ತಪ್ಪಿಸಲು ನ್ಯಾಯಾಂಗ ತನಿಖೆ: ಈಗ ಕಾಂಗ್ರೆಸ್ನವರು ಪಿಎಸ್ಐ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವಂತೆ ಕೇಳುತ್ತಿದ್ದಾರೆ. ಆದರೆ ನೀವೇಕೆ ಹಿಂದೆ ನ್ಯಾಯಾಂಗ ತನಿಖೆಗೆ ಕೊಟ್ಟಿರಲಿಲ್ಲ. ನೀವು ಯಾಕೆ ಕೊಟ್ಟಿರಲಿಲ್ಲ ಎಂದು ಮೊದಲು ಉತ್ತರ ಕೊಡಿ. ಅಂದು ನೀವು ಮಾಡಲಿಲ್ಲ ಮಾಡದೇ ಇರುವುದನ್ನ ಇಂದು ನಮಗೆ ಹೇಳುತ್ತಿದ್ದೀರಿ ಎಂದು ನ್ಯಾಯಾಂಗ ತನಿಖೆ ಬೇಡಿಕೆಯನ್ನು ಸಿಎಂ ತಳ್ಳಿಹಾಕಿದರು. ಪ್ರಕರಣವನ್ನು ದಾರಿ ತಪ್ಪಿಸಲು ನ್ಯಾಯಾಂಗ ತನಿಖೆ ಕೇಳುತ್ತಿದ್ದಾರೆ ಎಂದು ಹೇಳಿದರು.
ನ್ಯಾಯಾಲಯದ ಕಣ್ಗಾವಲಿನಲ್ಲಿ ಸಿಐಡಿ ತನಿಖೆ: ಅಕ್ರಮ ಆರೋಪ ಕೇಳಿಬಂದ ಕೂಡಲೇ ನಾವು ಆರೋಪಿಗಳ ಬಂಧನ ಮಾಡಿದ್ದೇವೆ. ಸಿಐಡಿ ಎಲ್ಲ ರೀತಿಯ ಕೆಲಸ ಮಾಡುತ್ತಿದೆ. ಈವರೆಗೆ ಯಾವ ನ್ಯಾಯಾಂಗ ತನಿಖೆಯಿಂದ ಪ್ರಕರಣ ಬೆಳಕಿಗೆ ಬಂದಿದೆ ಹೇಳಿ? ಈಗ ನಡೆಯುತ್ತಿರುವ ಸಿಐಡಿ ತನಿಖೆ ನ್ಯಾಯಾಲಯದ ಕಣ್ಗಾವಲಿನಲ್ಲಿ ನಡೆಯುತ್ತಿದೆ.
ನಮ್ಮ ಸರ್ಕಾರ ಸಂಪೂರ್ಣವಾಗಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಯಾವುದೇ ದಯಾ-ದಾಕ್ಷಿಣ್ಯ ಇಲ್ಲದೇ ಕ್ರಮ ತೆಗೆದುಕೊಳ್ಳಲು ಮುಕ್ತವಾದ ಅಧಿಕಾರವನ್ನು ಅಧಿಕಾರಿಗಳಿಗೆ ಕೊಟ್ಟಿದೆ. ಆದ್ದರಿಂದಲೇ ಇಷ್ಟು ದೊಡ್ಡ ಪ್ರಕರಣ ಹೊರಗೆ ಬಂದಿದೆ. ಈಗಾಗಲೇ ಎರಡು ಮೂರು ಪ್ರಕರಣ ಹೊರಗಡೆ ಬಂದಿದೆ.ಕಾಲ ಕಾಲಕ್ಕೆ ಪ್ರಕರಣಗಳು ಬಯಲಿಗೆ ಬರಲಿವೆ ಎಂದು ಸಿಎಂ ಹೇಳಿದರು.