ಬೆಂಗಳೂರು: ನಾನು ತುರ್ತು ಸೇವೆಯಲ್ಲಿ ನಿರತನಾಗಿದ್ದು, ಆರೋಗ್ಯ ಪ್ರಮಾಣಪತ್ರದೊಂದಿಗೆ ಪ್ರಯಾಣಿಸಿ ನನ್ನ ಇಲಾಖೆ ಕೆಲಸ ಕಾರ್ಯದಲ್ಲಿ ತೊಡಗಿದ್ದೇನೆ. ಅಂತರರಾಜ್ಯ ಪ್ರಯಾಣ ಮಾಡಿದ್ದರೂ ಮಾರ್ಗಸೂಚಿಯಂತೆಯೇ ಹೋಮ್ ಕ್ವಾರಂಟೈನ್ನಿಂದ ವಿನಾಯಿತಿ ಪಡೆದುಕೊಳ್ಳಲಾಗಿದೆ ಎಂದು ದೆಹಲಿಯಿಂದ ರಾಜ್ಯಕ್ಕೆ ಭೇಟಿ ನೀಡಿದ್ದರೂ ಹೋಮ್ ಕ್ವಾರಂಟೈನ್ ಆಗದ ಕುರಿತು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಸ್ಪಷ್ಟೀಕರಣ ನೀಡಿದ್ದಾರೆ.
ಆರ್‌ಎಂವಿ ಬಡಾವಣೆಯಲ್ಲಿನ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಅಗತ್ಯ ಸೇವೆಯಡಿ ಬರುವವರಿಗೆ ಇಡೀ ದೇಶದಲ್ಲಿ ಓಡಾಡಲು ಅವಕಾಶ ಇದೆ. ನಾನು ಎರಡು ಪ್ರಮುಖ ಇಲಾಖೆಗಳ ಜವಾಬ್ದಾರಿ ಹೊಂದಿದ್ದೇನೆ. ಔಷಧ ಹಾಗೂ ರಸಗೊಬ್ಬರ ಇಲಾಖೆ ನಿರ್ವಹಿಸಲು ನಾನು ಪ್ರವಾಸ ಮಾಡಬೇಕಾಗುತ್ತದೆ. ದಿನನಿತ್ಯ ನಾವು ನಮ್ಮ ಕಚೇರಿಗೆ ಹಲವರನ್ನು ಕರೆದು ಚರ್ಚೆ ನಡೆಸಬೇಕಾಗುತ್ತದೆ. ಕೇರಳದ ಜವಾಬ್ದಾರಿ ಕೂಡಾ ನನಗೆ ಇದೆ. ಔಷಧಿ ಪೂರೈಕೆ ಸಲುವಾಗಿ ನಾನು ಕೆಲಸ ನಿರ್ವಹಿಸುತ್ತಿದ್ದೇನೆ. ನಾನು ಕಳೆದ 60 ದಿನಗಳಿಂದ ದೆಹಲಿಯಲ್ಲಿ ಇದ್ದೆ, ಇಂದು ಕರ್ನಾಟಕದಲ್ಲಿ ಸಭೆ ನಡೆಸಲು ಬಂದಿದ್ದೇನೆ. ಬರುವ ಮುನ್ನ ನೋಡಲ್ ಅಧಿಕಾರಿಯ ಜೊತೆ ಮಾತನಾಡಿಕೊಂಡು ಬಂದಿದ್ದೇನೆ. ನಾನು ಯಾವುದೇ ನಿಯಮಗಳನ್ನು ಉಲ್ಲಂಘನೆ ಮಾಡಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ಇಂದು ಡಿಸಿಎಂ ಅಶ್ವತ್ಥನಾರಾಯಣ ಹಾಗೂ ಡಾ. ಸುಧಾಕರ್ ಜೊತೆ ಸಮಾಲೋಚನೆ ಮಾಡುತ್ತೇನೆ. ಯಾರಿಗೂ ಆತಂಕ ಬೇಡ. ರಾಜಕೀಯ ಜೀವನದಲ್ಲಿ ಡಿವಿಎಸ್ ಯಾವತ್ತೂ ಕಾನೂನು ಉಲ್ಲಂಘನೆ ಮಾಡಿಲ್ಲ. ಮುಂದೆಯೂ ಮಾಡಲ್ಲ. ಇಂದು ಸಂಜೆ 4 ಗಂಟೆಗೆ ರಾಜ್ಯ ಸರ್ಕಾರದ ಜೊತೆ ಸಭೆ ನಡೆಸುತ್ತಿದ್ದೇನೆ ಎಂದರು.
ಕೊರೊನಾವನ್ನು ಸುಲಭವಾಗಿ ಹತೋಟಿಗೆ ತರುತ್ತೇವೆ ಅಂತ ಏನಿಲ್ಲ. ಕೊರೊನಾ ಜೊತೆ ಜೀವನ ನಡೆಸುವ ಅನಿವಾರ್ಯತೆ ಬಂದಿದೆ. ಕೇಂದ್ರ ಸರ್ಕಾರ ಕೊರೊನಾ ನಿಯಂತ್ರಿಸಲು ಸಮರ್ಪಕವಾಗಿ ಕೆಲಸ ಮಾಡುತ್ತಿದೆ. ಆರಂಭದ ಅಡೆತಡೆಗಳನ್ನು ದಾಟಿದ್ದೇವೆ. ರಕ್ಷಣಾ ಇಲಾಖೆಯಿಂದ ಹಿಡಿದು ವೈರಸ್ ತಡೆಗಟ್ಟಲು ಸಮರ್ಪಕವಾಗಿ ಕೆಲಸ ಮಾಡುತ್ತಿದ್ದು, ಇಡೀ ಜಗತ್ತಿನಲ್ಲೇ ಕೊರೊನಾ ತಡೆ ತರಲು ಮಾತ್ರೆಗಳನ್ನು ಪೂರೈಸುವಲ್ಲಿ ನಾವು ಮೊದಲಿದ್ದೇವೆ ಎಂದು ತಿಳಿಸಿದರು.
ನಾನು ದೆಹಲಿಯಲ್ಲಿದ್ದರೆ ಪ್ರತಿ ಮೂರು ದಿನಕ್ಕೊಮ್ಮೆ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುತ್ತೇನೆ. ನನ್ನ ಮನೆಯಲ್ಲಿರುವ ಅಡುಗೆ ಕೆಲಸದ ಸಿಬ್ಬಂದಿಗೂ ಕೂಡ ಆರೋಗ್ಯ ತಪಾಸಣೆ ಮಾಡಿಸಲಾಗಿದೆ. ಆರೋಗ್ಯ ಸೇತು ಆ್ಯಪ್ ಬಳಕೆ ಮಾಡಿಕೊಂಡಿದ್ದೇನೆ ಎಂದು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಕುರಿತು ವಿವರಣೆ ನೀಡಿದರು.
ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ ಅವರು, ದೇಶದ ಅಳಿವು ಉಳಿವು ಬಂದಾಗ ದೇಶಕ್ಕೋಸ್ಕರ ಕೆಲಸ ಮಾಡಬೇಕಾದದ್ದು ಮೊದಲ ಆಯ್ಕೆ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ವಿಪಕ್ಷಗಳು ಮಾಡಬಾರದು. ಪಿಎಂ ಮೋದಿ ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಮಾತುಕತೆ ನಡೆಸಿದ ನಂತರವೇ ನಿರ್ಧಾರ ತಗೆದುಕೊಂಡಿದ್ದಾರೆ. ಪಶ್ಚಿಮ ಬಂಗಾಳ, ಕೇರಳ, ಪಂಜಾಬ್ ಸೇರಿದಂತೆ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಮಾತನಾಡಿ ನಿರ್ಧಾರ ತಗೆದುಕೊಳ್ಳಲಾಗಿದೆ. ಕೇಂದ್ರ ಸರ್ಕಾರ ಜನಮೆಚ್ಚುವ ಪ್ಯಾಕೇಜ್ ನೀಡಿದೆ. ವಿಪಕ್ಷಗಳು ಸಲಹೆ ಕೊಡಲಿ, ಅದನ್ನು ಬಿಟ್ಟು ಕೇವಲ ಟೀಕೆಗೋಸ್ಕರ ಆರೋಪ ಬೇಡ ಎಂದರು .