ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ಯಾವೊಬ್ಬ ನಾಗರಿಕರಿಗೂ ತೊಂದರೆಯಾಗುವುದಿಲ್ಲ. ಹಾಗಾಗಿ ಯಾರೂ ಕೂಡ ಆತಂಕಪಡುವ ಅಗತ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಿಲ್ ಜೈನ್ ಸ್ಪಷ್ಟಪಡಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಸೃಷ್ಟಿಯಾಗಿರುವ ಗೊಂದಲ ಸರಿಪಡಿಸಿ ಜನಜಾಗೃತಿ ಮೂಡಿಸಲು ಬಿಜೆಪಿ ದೇಶಾದ್ಯಂತ ಅಭಿಯಾನ ಹಮ್ಮಿಕೊಂಡಿದ್ದು, ಅದರ ಅಂಗವಾಗಿ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅನಿಲ್ ಜೈನ್ ಸುದ್ದಿಗೋಷ್ಠಿ ನಡೆಸಿದರು. ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆಯಿಂದ ದೇಶದ 130 ಕೋಟಿ ಜನರಿಗೆ ಯಾವುದೇ ತೊಂದರೆ ಆಗಲ್ಲ. ದೇಶದ ನಾಗರಿಕರಿಗಾಗಿ ಇದನ್ನು ಜಾರಿಗೆ ತಂದಿಲ್ಲ. ಹಾಗಾಗಿ ಯಾರೂ ಆತಂಕಪಡುವ ಅಗತ್ಯವಿಲ್ಲ. ಇದು ನೆರೆಯ ರಾಷ್ಟ್ರಗಳ ಅಲ್ಪಸಂಖ್ಯಾತರು ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಬಂದಿದ್ದರೆ ಅವರಿಗೆ ಪೌರತ್ವ ನೀಡುವ ಕಾಯ್ದೆಯಾಗಿದೆ. ಅಂತವರ ಗೌರವಯುತ ಬದುಕಿಗಾಗಿ ಅವರಿಗೆ ಪೌರತ್ವ ನೀಡುವುದಾಗಿದೆ ಎಂದರು.
ಮನಮೋಹನ್ ಸಿಂಗ್ 2003ರಲ್ಲಿ ಧಾರ್ಮಿಕ ಕಿರುಕುಳ ಅನುಭವಿಸಿ ವಲಸೆ ಬಂದಿರುವ ಬಾಂಗ್ಲಾದವರಿಗೆ ಪೌರತ್ವ ನೀಡಬೇಕೆಂದು ಮನವಿ ಮಾಡಿದ್ದರು. 2005-2006ರಲ್ಲಿ ಕಾಯ್ದೆಯನ್ನು ಯುಪಿಎ ಸರ್ಕಾರವೇ ರೂಪಿಸಿತ್ತು. ಈಗ ಅದೇ ಪಕ್ಷದ ನಾಯಕರು ವಿರೋಧ ಮಾಡುತ್ತಿರುವುದು ಯಾಕೆ? ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಇಷ್ಟೆಲ್ಲಾ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ ಅಷ್ಟೇ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಧರ್ಮದ ಆಧಾರದಲ್ಲಿಯೇ ದೇಶದ ವಿಭಜನೆ ಆಗಿದೆ. ಹೀಗಿರುವಾಗ ಮುಸಲ್ಮಾನರ ರಾಷ್ಟ್ರದಲ್ಲಿ ಅವರ ಮೇಲೆ ಧಾರ್ಮಿಕ ಕಿರುಕುಳ ನಡೆಯಲು ಸಾಧ್ಯವಿಲ್ಲ. ಹಾಗಾಗಿ ನೆರೆ ರಾಷ್ಟ್ರಗಳ ಮುಸಲ್ಮಾನರಿಗೆ ನಾವು ಪೌರತ್ವ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ಸಿಎಎಗೂ ಎನ್ಆರ್ಸಿಗೂ ಯಾವುದೇ ಸಂಬಂಧ ಇಲ್ಲ. ಇದು ಪೌರತ್ವ ನೀಡುವ ಕಾಯ್ದೆ. ಕಸಿದುಕೊಳ್ಳುವ ಕಾಯ್ದೆ ಅಲ್ಲ. ಅದೇ ರೀತಿ ಎನ್ಪಿಆರ್ ವಿಚಾರದಲ್ಲಿ ಕೂಡ ಗೊಂದಲ ಮಾಡಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿಯೂ ಸೆನ್ಸಸ್ ಮಾಡಲಾಗುತ್ತಿತ್ತು. ಸ್ವಾತಂತ್ರ್ಯ ನಂತರವೂ ನಡೆದಿದೆ. ಇದು 16ನೇ ಬಾರಿ ನಡೆಯುತ್ತಿರುವ ಸೆನ್ಸಸ್. 2010ರಲ್ಲಿಯೂ ಜನಗಣತಿ ನಡೆದಿತ್ತು. ಮನಮೋಹನ್ ಸಿಂಗ್ ಸರ್ಕಾರವೂ ಜನಗಣತಿ ಮಾಡಿತ್ತು. ಈಗ ಅವರೇ ಏಕೆ ವಿರೋಧ ಮಾಡುತ್ತಿದ್ದಾರೆ. ಬಜೆಟ್ ಅನುದಾನ ಹಂಚಿಕೆಯೂ ಜನಗಣತಿ ಆಧಾರದ ಮೇಲೆಯೇ ಇರಲಿದೆ. ಇದರ ಬಗ್ಗೆಯೂ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇದು ಖಂಡನೀಯ ಎಂದರು.
ಪ್ರತಿ 10 ವರ್ಷಕ್ಕೆ ಒಮ್ಮೆ ಜನಗಣತಿ ನಡೆಯಲಿದೆ. ಇದು ನಿರಂತರ ಪ್ರಕ್ರಿಯೆ. ಇದಕ್ಕೂ ಎನ್ಆರ್ಸಿಗೂ ಯಾವುದೇ ಸಂಬಂಧ ಇಲ್ಲ. ನಾವು ಎನ್ಆರ್ಸಿ ಜಾರಿಗೊಳಿಸುತ್ತಿಲ್ಲ. ಆ ವಿಚಾರ ನಮ್ಮ ಮುಂದಿಲ್ಲ. ಎನ್ಪಿಆರ್ಗೆ ಯಾವುದೇ ದಾಖಲೆಗಳ ಅಗತ್ಯವಿಲ್ಲ. ಹಾಗಾಗಿ ದಾಖಲೆ ಇಲ್ಲದವರು ಏನು ಮಾಡಬೇಕು ಎನ್ನುವ ಪ್ರಶ್ನೆ ಈಗ ಅಪ್ರಸ್ತುತ ಎಂದರು.