ಬೆಂಗಳೂರು : ಜನರು ಕೋವಿಡ್‌ನಿಂದ ಮುಜುಗರ, ಸಾಮಾಜಿಕ ಕಳಂಕಕ್ಕೊಳಗಾಗುವುದನ್ನು ತಪ್ಪಿಸಲು ಧೈರ್ಯದಿಂದ ಬಂದು ಹೆಚ್ಚೆಚ್ಚು ಕೋವಿಡ್ ಸೋಂಕು ಪರೀಕ್ಷೆ ನಡೆಸುವಂತಾಗಲು ಬಿಬಿಎಂಪಿ ಹೊಸ ಪ್ಲಾನ್ ಮಾಡಿದೆ. ಒಂದೆರಡು ಪ್ರಕರಣ ಮಾತ್ರ ಇದ್ರೆ ನಿರ್ಬಂಧಿತ ಪ್ರದೇಶ ಮಾಡಲಾಗ್ತಿಲ್ಲ. ಈಗ ಮನೆ ಮುಂದೆ ಪೋಸ್ಟರ್ ಅಂಟಿಸುವುದನ್ನೂ ಕೂಡ ಸ್ಥಗಿತಗೊಳಿಸಲಾಗುವುದು. ಇದರಿಂದ ಧೈರ್ಯವಾಗಿ ಜನ ಹೆಚ್ಚೆಚ್ಚು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.
ನಗರದಲ್ಲಿ ಆರೋಗ್ಯ ಅಧಿಕಾರಿಗಳಿಗೆ ಟಾರ್ಗೆಟ್ ಕೊಡಲಾಗಿದೆ ಎಂಬ ದೂರು ಕೇಳಿ ಬಂದ ಹಿನ್ನೆಲೆ ಉತ್ತರಿಸಿದ ಆಯುಕ್ತರು, ಪ್ರೈಮರಿ ಸಂಪರ್ಕಿತರನ್ನು ಸೋಂಕಿನ ಲಕ್ಷಣ ಹಾಗೂ ಕಾಯಿಲೆಗಳಿರುವ 50 ವರ್ಷ ಮೇಲ್ಪಟ್ಟವರನ್ನು ಮಾತ್ರ ಟೆಸ್ಟ್ ಮಾಡಿಸಲು ಟಾರ್ಗೆಟ್ ನೀಡಲಾಗಿದೆ. ಹಾಗಾಗಿ ಎಲ್ಲರನ್ನೂ ಟೆಸ್ಟ್ ಮಾಡಿಸಬೇಕಿಲ್ಲ. ಯಾರಲ್ಲಾದರೂ ಕೊರೊನಾ ಸೋಂಕಿನ ಲಕ್ಷಣಗಳಿದ್ದರೇ ಮಾತ್ರ ಬಂದು ಟೆಸ್ಟ್ ಮಾಡಿಸಲಿ ಎಂದರು.
ಸಿಸಿಸಿ ಕೇಂದ್ರಗಳಲ್ಲಿ ರೋಗಿಗಳಿಲ್ಲದಿದ್ದರೆ ಬಂದ್!: ಸಿಸಿಸಿ ಕೇಂದ್ರಗಳಲ್ಲಿ ಜನರು ಕಡಿಮೆ ಆಗ್ತಿದಾರೆ. ಸದ್ಯ ಶೇ. 50ರಷ್ಟು ಜನ ಕಡಿಮೆಯಾಗಿದ್ದಾರೆ. 12 ಸಿಸಿಸಿ ಕೇಂದ್ರಗಳಿವೆ. ರೋಗಿಗಳು ಕಡಿಮೆ ಇರುವ ಸಿಸಿಸಿ ಕೇಂದ್ರಗಳನ್ನು ಮುಚ್ಚಲಾಗುವುದು ಎಂದು ಆಯುಕ್ತರು ತಿಳಿಸಿದ್ರು. ಬಿಐಇಸಿಯಲ್ಲಿ ಆರು ಸಾವಿರ ಬೆಡ್‌ಗಳಿವೆ. ಅದರಲ್ಲಿ 1500 ಮಾತ್ರ ಆರಂಭದಲ್ಲಿ ತೆರೆಯಲಾಗಿತ್ತು. ಆದರೆ, ಈಗ ಅಲ್ಲಿಯೂ ರೋಗಿಗಳಿಲ್ಲ. ಉಳಿದ ಬೆಡ್‌ಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗುವುದು. ಹಾಗೂ ಬಾಡಿಗೆ ಕೊಡುತ್ತಿದ್ದುದ್ದನ್ನು ನಿಲ್ಲಿಸಲಾಗುವುದು ಎಂದರು.
19 ಆಸ್ಪತ್ರೆಗಳಲ್ಲಿ ಹೆಚ್ಚು ಮರಣ ಪ್ರಮಾಣ : ನಗರದ 19 ಆಸ್ಪತ್ರೆಗಳಲ್ಲಿ ಹೆಚ್ಚು ಕೋವಿಡ್ ಮರಣ ಸಂಭವಿಸುತ್ತಿರೋದನ್ನ ಗುರುತಿಸಲಾಗಿದೆ. ಈ ಆಸ್ಪತ್ರೆಗಳಲ್ಲಿ ಒಟ್ಟು 24,368 ಕೋವಿಡ್ ರೋಗಿಗಳು ಪಾಲಿಕೆ ಕಡೆಯಿಂದ ಅಡ್ಮಿಟ್ ಆಗಿದ್ದಾರೆ. ಇದರಲ್ಲಿ ಈವರೆಗೂ 1,598 ಸಾವಾಗಿವೆ ಎಂದರು.
ಆಸ್ಪತ್ರೆ ದಾಖಲು ಮರಣ ಮರಣ ಪ್ರಮಾಣ
ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜ್ 1368 202 14.8%
ವಿಕ್ಟೋರಿಯಾ 4358 293 6.7%
ಅಂಬೇಡ್ಕರ್ ಮೆಡಿಕಲ್ ಕಾಲೇಜ್ 1506 21 1.4%
ಆಕಾಶ್ ಮೆಡಿಕಲ್ ಕಾಲೇಜ್ 3%
ಮಲ್ಯ ಆಸ್ಪತ್ರೆ 13%
ರಾಜೀವ್ ಗಾಂಧಿ ಆಸ್ಪತ್ರೆ 13.6%
ಕೆ ಸಿ ಜನರಲ್ 11.3%
ಈ ಆಸ್ಪತ್ರೆಗಳಿಗೆ ಪಾಲಿಕೆ ತಂಡ ಭೇಟಿ ನೀಡಿ ಸಾವುಗಳಿಗೆ ಕಾರಣ ಏನು, ಬೇಗ ದಾಖಲಾಗಿದ್ದಿದ್ದರೆ ಜೀವ ಉಳಿಸಬಹುದಿತ್ತಾ?. ಅಂಕಿ-ಅಂಶ ಸರಿಯಾಗಿ ನೀಡುತ್ತಿದ್ದಾರಾ? ಎಂಬ ಬಗ್ಗೆ ಆಡಿಟ್ ಮಾಡಲಾಗುವುದು ಎಂದರು.