ಬೆಂಗಳೂರು : ಬಿಪಿಎಲ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಕೆಗೆ ನಾವು ಅವಕಾಶ ಕೊಟ್ಟಿಲ್ಲ. ಕಾರಣವೇನು ಅಂತ ಸದ್ಯದಲ್ಲೇ ಹೇಳುತ್ತೇವೆ. ಇನ್ನೂ ಒಂದಿಷ್ಟು ದಿನ ಎಪಿಎಲ್, ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಕೆಗೆ ಅವಕಾಶ ಇರುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ ತಿಂಗಳು ಪಡಿತರದಲ್ಲಿ ಅನ್ನಭಾಗ್ಯದಡಿ 5 ಕೆಜಿ ಅಕ್ಕಿ ಸಿಗುತ್ತೆ ಅಂತ ಡೆಡ್‌ಲೈನ್ ಕೊಡುವುದಕ್ಕೆ ಆಗಲ್ಲ. ಅಧಿಕಾರಿಗಳ ಜತೆ ಚರ್ಚೆ ಆಗ್ತಿದೆ. ಮಾಹಿತಿ ಪಡೆದಿದ್ದೇನೆ. ಅಕ್ಕಿ ಕೊಡಲು ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು ಮುಂದೆ ಬಂದಿವೆ. ದರದ ಬಗ್ಗೆಯೂ ಚರ್ಚೆ ಆಗ್ತಿದೆ. ಎರಡೂ ರಾಜ್ಯದ ಅಧಿಕಾರಿಗಳು ಕೂತು ದರ ನಿಗದಿ ಬಗ್ಗೆ ಚರ್ಚೆ ನಡೆಸುತ್ತಾರೆ. ಇನ್ನು ಹತ್ತು ದಿನಗಳಲ್ಲಿ ಎಲ್ಲವೂ ಅಂತಿಮವಾಗಲಿದೆ. ಅಕ್ಕಿ ವಿತರಣೆ ಬಗ್ಗೆ ಈಗಲೇ ಹೇಳಲಾಗದು ಎಂದರು.
ಆಗಸ್ಟ್ 26ರೊಳಗೆ ಎಲ್ಲರಿಗೂ ಹಣ ಜಮೆ: ಡಿಬಿಟಿ ವಿಷಯದಲ್ಲಿ ಕಳೆದ ತಿಂಗಳು ಹಣ ಪಾವತಿಗೆ ತಡವಾಯಿತು. ಈ ತಿಂಗಳ 25, 26ರೊಳಗೆ ಫಲಾನುಭವಿಗಳ ಅಕೌಂಟ್‌ಗೆ ಹಣ ಸಂದಾಯವಾಗುತ್ತದೆ. ರಾಜ್ಯದಲ್ಲಿರುವ 1.28 ಕೋಟಿ ಕಾರ್ಡುಗಳ ಪೈಕಿ 1 ಕೋಟಿ ಕಾರ್ಡ್ ಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ಉಳಿದಂತೆ, ಸುಮಾರು 21 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆ ಹೊಂದಾಣಿಕೆ ಆಗುತ್ತಿಲ್ಲ. ಆ ಪೈಕಿ 7 ಲಕ್ಷ ಕಾರ್ಡುಗಳ ಸಮಸ್ಯೆ ಸರಿಪಡಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಅಕ್ಕಿ ಬದಲು ರಾಗಿ, ಜೋಳ ವಿತರಣೆ: ಅನ್ನಭಾಗ್ಯ ಯೋಜನೆಯಡಿ ನೀಡುವ ಆಹಾರ ಪದಾರ್ಥಗಳಾದ ಅಕ್ಕಿ, ರಾಗಿ, ಜೋಳದ ಗುಣಮಟ್ಟ ಪರಿಶೀಲಿಸಿ 15 ದಿನ ವಿಳಂಬವಾದರೂ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲಿ ಅಕ್ಕಿ ಬಳಕೆ ಮಾಡುವುದಿಲ್ಲವೋ ಅಲ್ಲಿ ರಾಗಿ ಅಥವಾ ಜೋಳ ಪೂರೈಕೆ ಮಾಡಲು ಚರ್ಚೆ ನಡೆದಿದೆ. ಎಲ್ಲೆಲ್ಲಿ ರಾಗಿ ಎಷ್ಟು ಬಳಸುತ್ತಾರೋ ಜೋಳ ಬಳಕೆಯ ಮಾಹಿತಿ ಪಡೆದು, ಅದಕ್ಕನುಸಾರವಾಗಿ ಅಕ್ಕಿ ಬದಲಿಗೆ ಪೂರೈಕೆ ಮಾಡಲು ಮಾರ್ಗದರ್ಶನ ನೀಡಲಾಗಿದೆ. ಎಲ್ಲೆಲ್ಲಿ ಜೋಳ,ರಾಗಿ, ಅಕ್ಕಿ ಎಷ್ಟು ಪ್ರಮಾಣದಲ್ಲಿ ಬಳಕೆ ಮಾಡ್ತಾರೆ ಅನ್ನೋದರ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ ಎಂದು ಹೇಳಿದರು.
ತಾಲೂಕು ಮಟ್ಟದಲ್ಲಿ ಪ್ರತ್ಯೇಕ ಕಚೇರಿ: ಆಹಾರ ಇಲಾಖೆಯಲ್ಲಿ ಖಾಲಿ ಇರುವ 2,181 ಹುದ್ದೆಗಳ ಭರ್ತಿಗೆ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ತಾಲೂಕು ಮಟ್ಟದಲ್ಲಿ ಪ್ರತ್ಯೇಕ ಆಹಾರ ಇಲಾಖೆ ಕಚೇರಿಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಆಹಾರ ಇಲಾಖೆಯ ಕಚೇರಿಗಳಿಗೆ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಕ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : K.H.Muniyappa: ಅಕ್ಕಿ ಬದಲು ಆಗಸ್ಟ್ ತಿಂಗಳ ಡಿಬಿಟಿ ಹಣ ಒಂದು ವಾರದಲ್ಲಿ ಫಲಾನುಭವಿಗಳ ಖಾತೆಗೆ- ಸಚಿವ ಕೆ.ಎಚ್.ಮುನಿಯಪ್ಪ