ಬೆಂಗಳೂರು : ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಇಂದು ರಾತ್ರಿ 8 ಗಂಟೆಯಿಂದ ಒಂದು ವಾರಗಳ ಕಾಲ ಲಾಕ್ಡೌನ್ ಇರುವ ಹಿನ್ನೆಲೆ ಓಲಾ ಹಾಗೂ ಉಬರ್ ಕ್ಯಾಬ್ಗಳು ರಸ್ತೆಗೆ ಇಳಿಯುವುದಿಲ್ಲ ಎಂದು ಕರ್ನಾಟಕ ರಾಜ್ಯ ಓಲಾ-ಉಬರ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ತನ್ವೀರ್ ಪಾಷ ಹೇಳಿದರು.
ಈ ಬಗ್ಗೆ ಓಲಾ ಹಾಗೂ ಉಬರ್ ಕ್ಯಾಬ್ ಚಾಲಕರಿಗೆ ತಿಳಿಸಲಾಗಿದೆ. ಅಲ್ಲದೆ ಏರ್ಪೋರ್ಟ್ ಪಿಕ್ಅಪ್ ಅಂಡ್ ಡ್ರಾಪ್ಗೆ ಹೋಗುವ ಚಾಲಕರು ಪ್ರಯಾಣಿಕರ ಏರ್ ಟಿಕೆಟ್ ಅನ್ನು ಕಲೆಕ್ಟ್ ಮಾಡಿ ಜೊತೆಯಲ್ಲಿ ಇಟ್ಟುಕೊಂಡು ಪ್ರಯಾಣ ಮಾಡಿ. ಒಂದು ವೇಳೆ ಪೊಲೀಸರು ತಡೆದರೆ ವಿಮಾನದ ಟಿಕೆಟ್ ಪಾಸ್ ಆಗಿರುತ್ತದೆ. ಸರ್ಕಾರ ಕೊರೊನಾ ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ. ಅವರು ಮಾಡಿದ ತಪ್ಪಿಗೆ ಮತ್ತೆ-ಮತ್ತೆ ಲಾಕ್ಡೌನ್ ಮಾಡಿ ಬಡವರು, ಶ್ರಮಿಕರು, ಕೂಲಿ ಕಾರ್ಮಿಕರಿಗೆ ಹಾಗೂ ಕ್ಯಾಬ್ ಚಾಲಕರಿಗೆ ತುಂಬಾ ದೊಡ್ಡ ಪೆಟ್ಟು ಬಿದ್ದಿದೆ ಎಂದು ತನ್ವೀರ್ ಬೇಸರ ವ್ಯಕ್ತಪಡಿಸಿದರು.
ನಾಳೆಯಿಂದ ನಮ್ಮ ಚಾಲಕರು ಹೇಗೆ ಜೀವನವನ್ನು ನಿರ್ವಹಿಸಬೇಕು ಎಂದು ಪರಿತಪಿಸುತ್ತಿದ್ದಾರೆ. ಕೋವಿಡ್ ಭೀತಿಯಿಂದ ಕ್ಯಾಬ್ಗಳಿಗೆ ಬ್ಯುಸಿನೆಸ್ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಅಲ್ಲದೆ ಸರ್ಕಾರ 7ಲಕ್ಷ ಕ್ಯಾಬ್ ಚಾಲಕರಿಗೆ ಐದು ಸಾವಿರ ರೂ. ಪರಿಹಾರ ಹಣ ನೀಡುವುದಾಗಿ ಹೇಳಿ, ಕೇವಲ ಒಂದು ಲಕ್ಷ ಚಾಲಕರಿಗೆ ಮಾತ್ರ ಅನುದಾನದ ಹಣ ನೀಡಿ ಮಾತು ತಪ್ಪಿದೆ ಎಂದು ಅಸಮಾಧಾನ ಹೊರಹಾಕಿದರು.