ಬೆಂಗಳೂರು : ರಾಜ್ಯಪಾಲರಿಗೆ ರಾಜಭವನ ಇರುವಂತೆ ರಾಜ್ಯದ ಮುಖ್ಯಮಂತ್ರಿಗೂ ಮೀಸಲು ಸರ್ಕಾರಿ ಬಂಗಲೆಯ ಅಗತ್ಯತೆ ಸ್ಪಷ್ಟ. ರಾಜ್ಯದ ಪ್ರಥಮ ಪ್ರಜೆ, ನ್ಯಾಯಾಂಗ ಮತ್ತು ಕಾರ್ಯಾಂಗದ ಮುಖ್ಯಸ್ಥರಿಗೆ ಇರುವಂತೆ ಸಿಎಂಗೂ ಮೀಸಲು ಸರ್ಕಾರಿ ಬಂಗಲೆಯ ಅವಶ್ಯಕತೆ ಇದೆ.
ಈ ಹಿಂದೆ ಅನುಗ್ರಹ ನಿವಾಸವನ್ನು ಮುಖ್ಯಮಂತ್ರಿಗಳಿಗೆ ಮೀಸಲಿಡಲಾಗುತ್ತಿತ್ತಾದರೂ ಮೌಢ್ಯ ಮತ್ತು ಅದೃಷ್ಟದ ಬೆನ್ನೇರಿ ಹೋಗುವ ರಾಜಕಾರಣಿಗಳಿಂದಾಗಿ ಒಬ್ಬೊಬ್ಬ ಸಿಎಂ ಒಂದೊಂದು ನಿವಾಸ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ರಾಜ್ಯದ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಪದೇಪದೆ ಬದಲಾವಣೆ ಆಗುತ್ತಿದೆ.
ಕೇರಳ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕ್ಲಿಫ್ ಹೌಸ್. ಯಾರೇ ಸಿಎಂ ಆದರೂ ಅವರು ಕ್ಲಿಫ್ ಹೌಸ್‌ನಲ್ಲೇ ವಾಸ್ತವ್ಯ ಹೂಡುತ್ತಾರೆ. ಅದೇ ರೀತಿ ಮಹಾರಾಷ್ಟ್ರ ಸಿಎಂ ಅಧಿಕೃತ ನಿವಾಸ ವರ್ಷಾ ಬಂಗಲೆ, ಅಲ್ಲಿ ಯಾರೇ ಸಿಎಂ ಆದರೂ ವರ್ಷಾ ಬಂಗ್ಲೋದಲ್ಲೇ ಅವರ ವಾಸ್ತವ್ಯ. ತೆಲಂಗಾಣದಲ್ಲೂ ಮುಖ್ಯಮಂತ್ರಿಗಳಿಗಾಗಿಯೇ ಪ್ರಗತಿ ನಿವಾಸ ಮೀಸಲಿರಿಸಲಾಗಿದೆ.
ಅಲ್ಲಿನ ಸಿಎಂಗಳು ಪ್ರಗತಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಇನ್ನು, ತಮಿಳುನಾಡಿನಲ್ಲಿ ಜಯಲಲಿತಾ ನಿವಾಸ ಪೋಯೆಸ್ ಗಾರ್ಡನ್ ಅನ್ನು ಸರ್ಕಾರಿ ಕಚೇರಿ ಹಾಗೂ ಬಂಗಲೆಯಾಗಿ ಮಾಡಲು ಮದ್ರಾಸ್ ಹೈಕೋರ್ಟ್ ಸಲಹೆ ನೀಡಿದೆ. ಬಹುತೇಕ ಅದೇ ಸಿಎಂ ಮೀಸಲು ವಸತಿಗೃಹವಾಗಲಿದೆ.
ಆದರೆ, ಕರ್ನಾಟಕದ ಸ್ಥಿತಿ ಮಾತ್ರ ಭಿನ್ನ, ಅನುಗ್ರಹ, ಕಾವೇರಿ, ರೇಸ್ ಕೋರ್ಸ್ ನಿವಾಸ ಹೀಗೆ ಸಿಎಂ ಆದ ಒಬ್ಬೊಬ್ಬರು ಒಂದೊಂದು ನಿವಾಸದಲ್ಲಿ ವಾಸ್ತವ್ಯ ಹೂಡುತ್ತಾ ಮುಖ್ಯಮಂತ್ರಿಗಳಿಗೆ ನಿಗದಿತ ಮೀಸಲು ನಿವಾಸವನ್ನೇ ಇಲ್ಲವಾಗಿಸಿಬಿಟ್ಟಿದ್ದಾರೆ.
ರಾಜಭವನದಲ್ಲಿ ರಾಜ್ಯಪಾಲರು ವಾಸ್ತವ್ಯ ಹೂಡಲಿದ್ದು, ಯಾರೇ ರಾಜ್ಯಪಾಲರಾಗಿ ಬಂದರೂ ಅವರ ಗೃಹ ಕಚೇರಿ, ಕಚೇರಿ, ಅಧಿಕೃತ ನಿವಾಸ ಎಲ್ಲವೂ ರಾಜಭವನವೇ.. ಅದೇ ರೀತಿ ರಾಜ್ಯಕ್ಕೆ ಹೈಕೋರ್ಟ್ ಮುಖ್ಯ ನಾಯ್ಯಮೂರ್ತಿಗಳಾಗಿ ಯಾರೇ ಬಂದರೂ ಅವರಿಗೆ ಮೀಸಲು ಸರ್ಕಾರಿ ಬಂಗಲೆ ವ್ಯವಸ್ಥೆ ಇದೆ.
ರಾಜ್ಯ ಪೊಲೀಸ್ ನಿರ್ದೇಶಕರಿಗೂ ನೃಪತುಂಗ ರಸ್ತೆಯಲ್ಲಿ ಪೊಲೀಸ್ ಪ್ರಧಾನ ಕಚೇರಿ ಎದುರಿನಲ್ಲೇ ಸರ್ಕಾರಿ ಬಂಗಲೆ ನೀಡಲಾಗಿದೆ. ಯಾರೇ ಡಿಜಿ ಆದರೂ ಅವರಿಗೆ ಅದೇ ನಿವಾಸ ನೀಡಲಾಗುತ್ತದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೂ ಬಾಲಬ್ರೂಯಿ ಅತಿಥಿಗೃಹದ ಪಕ್ಕದ ಸರ್ಕಾರಿ ನಿವಾಸವನ್ನು ಮೀಸಲಿರಿಸಿದ್ದು, ಯಾರೇ ಸಿಎಸ್ ಆದರೂ ಅವರಿಗೆ ಅದೇ ನಿವಾಸ ನೀಡಲಾಗುತ್ತದೆ. ಆದರೆ, ರಾಜ್ಯದ ಮುಖ್ಯಮಂತ್ರಿಗಳಿಗೆ ಮಾತ್ರ ಮೀಸಲು ಸರ್ಕಾರಿ ನಿವಾಸದ ವ್ಯವಸ್ಥೆ ಕಲ್ಪಿಸಿಲ್ಲ.
ಲೋಕೋಪಯೋಗಿ ಇಲಾಖೆ ರಾಜ್ಯದ ಮಂತ್ರಿಮಂಡಲ,ನ್ಯಾಯಾಂಗ,ಕಾರ್ಯಾಂಗದ ಮುಖ್ಯಸ್ಥರಿಗೆ ಸರ್ಕಾರಿ ಬಂಗಲೆ ವ್ಯವಸ್ಥೆ ಕಲ್ಪಿಸುತ್ತಿದೆ. ಸಚಿವ ಸಂಪುಟ ಸದಸ್ಯರು,ವಿಧಾನಸಭೆ ಅಧ್ಯಕ್ಷರು, ಸಭಾಪತಿ, ಪ್ರತಿಪಕ್ಷ ನಾಯಕ, ಸಿಎಸ್ ಹೀಗೆ ಎಲ್ಲರಿಗೂ ನಿವಾಸಗಳ ವ್ಯವಸ್ಥೆ ಮಾಡಿದೆ. ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ನಿವಾಸಗಳ ಹಂಚಿಕೆ ಮಾಡುತ್ತದೆ. ಸಿಎಸ್, ಡಿಜಿ ಮತ್ತು ಸಿಜೆ ನಿವಾಸಗಳು ಆಯಾ ಹುದ್ದೆಯಲ್ಲಿ ಹಾಲಿ ಇರುವವರಿಗೆ ಮೀಸಲಾಗಿದ್ದರೆ, ಸಿಎಂ ಸೇರಿ ಇತರರಿಗೆ ಕೋರಿಕೆ ಮತ್ತು ಆದ್ಯತೆ ಮೇಲೆ ಹಂಚಿಕೆ ಮಾಡಲಾಗುತ್ತದೆ.
ಅನುಗ್ರಹಕ್ಕೆ ತಟ್ಟಿದ ಶಾಪ : ಸಾಮಾನ್ಯವಾಗಿ ಮುಖ್ಯಮಂತ್ರಿ ಆದವರು ಅನುಗ್ರಹ ನಿವಾಸವನ್ನು ಇಷ್ಟಪಡುತ್ತಾರೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಆಗಿದ್ದು, ಯಾರೇ ಮುಖ್ಯಮಂತ್ರಿ ಆದರೂ ಅವರಿಗೆ ಕೃಷ್ಣಾವೇ ಗೃಹ ಕಚೇರಿಯಾಗಿದೆ. ಕೃಷ್ಣಾ ಹಾಗೂ ಅನುಗ್ರಹ ನಿವಾಸ ಒಂದಕ್ಕೊಂದು ಸಂಪರ್ಕ ಕಲ್ಪಿಸಿಕೊಳ್ಳುವಂತಿದ್ದು, ಚಿಕ್ಕ ಗೇಟ್ ವ್ಯವಸ್ಥೆ ಮಾಡಲಾಗಿದೆ.
ಹೀಗಾಗಿ, ನಿವಾಸ ಮತ್ತು ಕಚೇರಿಗೆ ಓಡಾಟ ನಡೆಸಲು ಮುಖ್ಯಮಂತ್ರಿಗಳಿಗೆ ಹೆಚ್ಚು ಉಪಯುಕ್ತ ಎನ್ನುವ ಕಾರಣಕ್ಕೆ ಬಹುತೇಕ ಮುಖ್ಯಮಂತ್ರಿಗಳು ಅನುಗ್ರಹ ನಿವಾಸಕ್ಕೆ ಜೈ ಅನ್ನುತ್ತಿದ್ದರು. ಒಂದು ರೀತಿಯಲ್ಲಿ ಅನುಗ್ರಹ ನಿವಾಸ ಮುಖ್ಯಮಂತ್ರಿಗಳ ಮೀಸಲು ನಿವಾಸ ಎನ್ನುವಂತೆಯೇ ಆಗಿತ್ತು.
1994-96ರವರೆಗೆ ಹೆಚ್ ಡಿ ದೇವೇಗೌಡ, 1999-2004ರವರೆಗೆ ಎಸ್ ಎಂ ಕೃಷ್ಣ, 2004-05ರವರೆಗೆ ಧರಂಸಿಂಗ್, 2006-7ರವರೆಗೆ ಹೆಚ್ ಡಿ ಕುಮಾರಸ್ವಾಮಿ ಮತ್ತು 2011-12 ರಲ್ಲಿ ಡಿ ವಿ ಸದಾನಂದಗೌಡರು ಅನುಗ್ರಹದಲ್ಲೇ ವಾಸ್ತವ್ಯ ಹೂಡಿದ್ದರು. ಆದರೆ, ಎಸ್ ಎಂ ಕೃಷ್ಣ ಹೊರತುಪಡಿಸಿ ಇತರರು ಮುಖ್ಯಮಂತ್ರಿ ಆಗಿ ಅವಧಿ ಪೂರ್ಣಗೊಳಿಸಲಿಲ್ಲ.
ಹೀಗಾಗಿ, ಅನುಗ್ರಹಕ್ಕೆ ಹೋದವರು ಅಧಿಕಾರಾವಧಿ ಪೂರ್ಣಗೊಳಿಸುವುದಿಲ್ಲ ಎನ್ನುವ ಮೂಢನಂಬಿಕೆ ಹುಟ್ಟಿದೆ. ಇದೇ ಕಾರಣಕ್ಕಾಗಿ ಬಿ ಎಸ್ ಯಡಿಯೂರಪ್ಪ ಮೊದಲ ಬಾರಿಗೆ 2008ರಲ್ಲಿ ಮುಖ್ಯಮಂತ್ರಿ ಆದಾಗ ಅನುಗ್ರಹದ ಬದಲು ಡಿಸಿಎಂ ಆಗಿದ್ದಾಗ, ವಾಸವಿದ್ದ ರೇಸ್ ಕೋರ್ಸ್ ರಸ್ತೆಯ ರೇಸ್ ವ್ಯೂ ಕಾಟೇಲ್-2 ಅನ್ನೇ ಅಧಿಕೃತ ನಿವಾಸ ಮಾಡಿಕೊಂಡರು.
ಯಡಿಯೂರಪ್ಪ ನಂತರ ಮುಖ್ಯಮಂತ್ರಿ ಆದ ಡಿ ವಿ ಸದಾನಂದ ಗೌಡ ಅನುಗ್ರಹಕ್ಕೆ ಗೃಹ ಪ್ರವೇಶ ಮಾಡಿದರೂ ಕೇವಲ 11 ತಿಂಗಳಿಗೆ ಅಧಿಕಾರ ಕಳೆದುಕೊಂಡರು. ಹಾಗಾಗಿ, ನಂತರ ಮುಖ್ಯಮಂತ್ರಿ ಆದ ಜಗದೀಶ್ ಶೆಟ್ಟರ್, ಸಚಿವರಾಗಿದ್ದಾಗ ಹಂಚಿಕೆಯಾಗಿದ್ದ ಕಾವೇರಿಯಲ್ಲೇ ವಾಸ್ತವ್ಯ ಮುಂದುವರೆಸಿದರು. ಶೆಟ್ಟರ್ ನಂತರ ಮುಖ್ಯಮಂತ್ರಿ ಆದ ಸಿದ್ದರಾಮಯ್ಯ ಕೂಡ ಅನುಗ್ರಹದ ಕಡೆ ತಿರುಗಿ ನೋಡಲಿಲ್ಲ.
ಬದಲಾಗಿ ಶೆಟ್ಟರ್ ಇದ್ದ ಕಾವೇರಿ ನಿವಾಸವನ್ನೇ ವಾಸ್ತು ಪ್ರಕಾರ ನವೀಕರಿಸಿ ಕಾವೇರಿ ನಿವಾಸವನ್ನೇ ಅಧಿಕೃತ ನಿವಾಸವನ್ನಾಗಿ ಮಾಡಿಕೊಂಡರು. ಅದೇ ನಿವಾಸದಲ್ಲಿ ಪೂರ್ಣಾವಧಿ ಅಧಿಕಾರ ನಡೆಸಿದರು. ಹಾಗಾಗಿಯೇ, ಯಡಿಯೂರಪ್ಪ ಮುಖ್ಯಮಂತ್ರಿ ಆದ ನಂತರ ಕಾವೇರಿ ನಿವಾಸಕ್ಕಾಗಿಯೇ ಕಾದು ಕುಳಿತು ಪಡೆದುಕೊಂಡರು. ರಾಜಕಾರಣಿಗಳ ಈ ರೀತಿಯ ಮೌಢ್ಯ, ಅದೃಷ್ಟದ ಕಾರಣಗಳಿಗಾಗಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಅನುಗ್ರಹದಿಂದ ರೇಸ್ ಕೋರ್ಸ್ ರಸ್ತೆಗೆ ಹೋಗಿ ಕಾವೇರಿಗೆ ಬಂದು ನಿಂತಿದೆ.
ಕಾವೇರಿ ನಿವಾಸದೊಳಗೆ ಯಡಿಯೂರಪ್ಪ : ಸದ್ಯ ಕಾವೇರಿ ನಿವಾಸದಲ್ಲಿ ನಿಕಟ ಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ವಾಸವಿದ್ದಾರೆ. ನಿವಾಸ ತೆರವಿಗೆ ಕಾನೂನು ಪ್ರಕಾರವೇ ಆರು ತಿಂಗಳ ಕಾಲಾವಾಶ ಅವರಿಗೆ ಇರಲಿದೆ. ಹಾಗಾಗಿ, ಅವರನ್ನು ಕಾವೇರಿ ನಿವಾಸದಿಂದ ತೆರವು ಮಾಡುವಂತೆ ಸೂಚನೆ ನೀಡಲು ಸಾಧ್ಯವಿಲ್ಲ, ಅಲ್ಲದೇ ಯಡಿಯೂರಪ್ಪ ಕಾರಣದಿಂದಾಗಿಯೇ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವ ಬಸವರಾಜ ಬೊಮ್ಮಾಯಿ ಕಾವೇರಿ ನಿವಾಸದ ತಂಟೆಗೆ ಯಾವ ಕಾರಣಕ್ಕೂ ಹೋಗುವುದಿಲ್ಲ.
ಯಡಿಯೂರಪ್ಪ ನಿವಾಸ ಖಾಲಿ ಮಾಡುವವರೆಗೂ ಕಾಯುವುದೊಂದೇ ಅವರಿಗಿರುವ ದಾರಿ. ಇನ್ನು, ಹಿಂದಿನ ಸಿಎಂಗಳ ಅಧಿಕೃತ ನಿವಾಸವಾಗಿದ್ದ ಅನುಗ್ರಹವನ್ನ ಈಗ ಸಿಎಂಗಳು ಬೇಡ ಎನ್ನುತ್ತಿದ್ದ ಕಾರಣಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರಿಗೆ ಹಂಚಿಕೆ ಮಾಡಲಾಗಿದೆ. ಹಾಗಾಗಿ, ಬಸವರಾಜ ಬೊಮ್ಮಾಯಿ ಅವರಿಗೆ ಕಾವೇರಿಯೂ ಇಲ್ಲ, ಅನುಗ್ರಹವೂ ಇಲ್ಲದಂತಾಗಿದೆ.
ಸಿಎಸ್ ನಿವಾಸದತ್ತ ಸಿಎಂ ಚಿತ್ತ : ಬಾಲಬ್ರೂಯಿ ಅತಿಥಿಗೃಹ ಮತ್ತು ಆರ್ಟ್ ಗ್ಯಾಲರಿ ನಡುವಿನ ಸರ್ಕಾರಿ ನಿವಾಸ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮೀಸಲಾಗಿದೆ. ಸದ್ಯ ಅಲ್ಲಿ ಸಿ ಎಸ್ ರವಿಕುಮಾರ್ ವಾಸ ಮಾಡುತ್ತಿದ್ದಾರೆ. ಆ ನಿವಾಸ ಅನುಗ್ರಹಕ್ಕಿಂತ ಚಿಕ್ಕದಾಗಿದೆಯಾದರೂ ವಿಧಾನಸೌಧ ಮತ್ತು ಗೃಹ ಕಚೇರಿ ಕೃಷ್ಣಾಗೆ ಮಧ್ಯದಲ್ಲಿದೆ. ಹೀಗಾಗಿ, ಆ ನಿವಾಸವನ್ನು ತಾತ್ಕಾಲಿಕವಾಗಿ ಬಳಕೆ ಮಾಡಿಕೊಳ್ಳುವ ಕುರಿತು ಸಿಎಂ ಬೊಮ್ಮಾಯಿ ಚಿಂತನೆ ನಡೆಸಿದ್ದಾರೆ.
ಪ್ರೊಟೊಕಾಲ್ ಭದ್ರತೆ ಸಮಸ್ಯೆ : ಮುಖ್ಯಮಂತ್ರಿಗಳಿಗೆ ಮೀಸಲು ಸರ್ಕಾರಿ ನಿವಾಸವಿದ್ದಲ್ಲಿ ಪ್ರೋಟೊಕಾಲ್ ಪ್ರಕಾರ ಭದ್ರತೆ ಕಲ್ಪಿಸಲು ಸುಲಭವಾಗಲಿದೆ. ಭದ್ರತೆ ಕಲ್ಪಿಸಲು ಸ್ಥಳದಲ್ಲೇ ಶಾಶ್ವತ ವ್ಯವಸ್ಥೆ ಕಲ್ಪಿಸಿಕೊಳ್ಳಬಹುದು. ಆದರೆ, ಸಿಎಂ ನಿವಾಸ ಪದೇಪದೆ ಬದಲಾಗುತ್ತಿದ್ದರೆ ಶಾಶ್ವತ ವ್ಯವಸ್ಥೆ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಪೊಲೀಸ್ ಇಲಾಖೆಯ ಅಳಲಾಗಿದೆ.
ಸಿಎಂ ವಾಸ್ತವ್ಯ ಹೂಡುವ ನಿವಾಸದ ಪರಿಸರವನ್ನು ಸುಪರ್ದಿಗೆ ಪಡೆದುಕೊಳ್ಳಬೇಕು, ಭದ್ರತಾ ಕಣ್ಗಾವಲು ವ್ಯವಸ್ಥೆ ಪದೇಪದೆ ಬದಲಾವಣೆ ಮಾಡಬೇಕಿದೆ. ಅದರ ಬದಲು ಶಾಶ್ವತ ನಿವಾಸ ಇದ್ದರೆ ಅಲ್ಲಿಗೆ ಎಲ್ಲ ಭದ್ರತಾ ವ್ಯವಸ್ಥೆ ಶಾಶ್ವತವಾಗಿ ಕಲ್ಪಿಸಬಹುದು ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು.
ವಾಸ್ತು, ನವೀಕರಣ : ಮುಖ್ಯಮಂತ್ರಿಗಳಿಗೆ ಮೀಸಲು ನಿವಾಸ ಇದ್ದಲ್ಲಿ ಆ ನಿವಾಸವನ್ನೇ ಸ್ವಲ್ಪಮಟ್ಟಿಗೆ ನವೀಕರಿಸಿ ಅಥವಾ ಅಲ್ಪಸ್ವಲ್ಪ ಬದಲಾಯಿಸಿ ವಾಸ್ತವ್ಯ ಹೂಡುತ್ತಾರೆ. ಆದರೆ, ಮೀಸಲು ಇಲ್ಲದ ಕಾರಣಕ್ಕೆ ಅವರ ಆಯ್ಕೆಯ ಹಾಗೂ ಅದೃಷ್ಟದ ಮನೆಯ ಹುಡುಕಾಟ ನಡೆಸುತ್ತಾರೆ. ಅದನ್ನು ನವೀಕರಣ ಮಾಡುತ್ತಾರೆ.
ವಾಸ್ತು ಪ್ರಕಾರ ಬದಲಾವಣೆ ಮಾಡಿಕೊಳ್ಳುತ್ತಾರೆ. ಹೀಗೆ ಪ್ರತಿ ಮುಖ್ಯಮಂತ್ರಿ ಬಂದಾಗಲೂ ನಿವಾಸ ನವೀಕರಣಕ್ಕಾಗಿಯೇ ಸಾರ್ವಜನಿಕರ ಹಣ ವ್ಯರ್ಥವಾಗಿ ಪೋಲಾಗುತ್ತಿದೆ. ಅದೇ ಮೀಸಲು ನಿವಾಸ ವ್ಯವಸ್ಥೆ ಮಾಡಿದ್ದಲ್ಲಿ ಹಣ ಪೋಲಾಗುವುದನ್ನು ತಡೆಯಬಹುದಾಗಿದೆ ಅಂತಾರೆ ಹೆಸರೇಳಲಿಚ್ಚಿಸದ ಬಿಜೆಪಿ ನಾಯಕರು.
ರಾಜ್ಯದಲ್ಲಿ ಮುಖ್ಯಮಂತ್ರಿಗಳಿಗಾಗಿಯೇ ಮೀಸಲು ನಿವಾಸ ಪ್ರತ್ಯೇಕವಾಗಿ ಇಲ್ಲದ ಕಾರಣ ಇಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸರ್ಕಾರಿ ನಿವಾಸ ಸಿಕ್ಕದಂತಾಗಿದೆ. ಅಧಿಕಾರಕ್ಕೆ ಬಂದು ಅರ್ಧ ತಿಂಗಳು ಕಳೆದರೂ ಅಧಿಕೃತ ಸರ್ಕಾರಿ ನಿವಾಸವಿಲ್ಲದೇ ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಬಂದಿದೆ.
ಇನ್ನಾದರೂ ಮೌಢ್ಯ, ಅದೃಷ್ಟ ಎನ್ನದೆ ನೆರೆ ರಾಜ್ಯಗಳಲ್ಲಿ ಇರುವಂತೆ ಪ್ರತ್ಯೇಕ ಕಟ್ಟಡವನ್ನು ಕೇವಲ ಹಾಲಿ ಮುಖ್ಯಮಂತ್ರಿಗಳ ನಿವಾಸಕ್ಕೆ ಮೀಸಲಿಟ್ಟರೆ ಅಧಿಕೃತ ನಿವಾಸವಿಲ್ಲದೇ ಮುಖ್ಯಮಂತ್ರಿಗಳು ಪರದಾಡುವುದನ್ನು ತಪ್ಪಿಸಬಹುದಾಗಿದೆ.