ಬೆಂಗಳೂರು : ಕೋವಿಡ್ ವೈರಸ್ನ ಹೊಸ ತಳಿ ಓಮಿಕ್ರಾನ್ ದೇಶದಲ್ಲಿ ಕಂಡು ಬಾರದಿದ್ದರೂ, ಈ ಕುರಿತ ಆತಂಕ ಎಲ್ಲೆಡೆ ಹಬ್ಬಿದೆ. ಸರ್ಕಾರಗಳು ಅತಿ ಮುನ್ನೆಚ್ಚರಿಕೆ ವಹಿಸಿ, ಕಟ್ಟುನಿಟ್ಟಾಗಿ ಪರೀಕ್ಷೆಗಳನ್ನು ಮಾಡಲು, ಎಲ್ಲರೂ ಲಸಿಕೆ ಪಡೆಯಲು ಸೂಚನೆ ನೀಡಿವೆ.
ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಈವರೆಗೆ ಹೊಸ ತಳಿ ಪತ್ತೆಯಾಗಿಲ್ಲ. ಡೆಲ್ಟಾ ರೂಪಾಂತರಿ ತಳಿ ಮಾತ್ರ ಕಂಡು ಬರುತ್ತಿದೆ. ಹೊಸ ತಳಿ ಗುರುತು ಮಾಡುವ ನಿಟ್ಟಿನಲ್ಲಿ ಎಲ್ಲಾ ಅಗತ್ಯಕ್ರಮ ಕೈಗೊಳ್ಳಲಾಗಿದೆ ಎಂದರು.
ಕೋವಿಡ್ ವೈರಾಣುವಿನ ಯಾವುದೇ ತಳಿ ಇದ್ದರೂ, ಹಿಂದಿನಂತೆಯೇ ನಮ್ಮ ಪರೀಕ್ಷೆಗಳು ಇರಲಿವೆ. ಸ್ಯಾಂಪಲ್‌ಗಳ ಟೆಸ್ಟ್ ಮಾಡಲಾಗುತ್ತದೆ. ಪಾಸಿಟಿವ್ ಬಂದ ಕೆಲವು ಸ್ಯಾಂಪಲ್‌ಗಳ ಜಿನೋಮ್ ಸ್ವೀಕ್ವೆನ್ಸಿಂಗ್ ಟೆಸ್ಟ್ ಮಾಡಿ ತಳಿ ಯಾವುದೆಂದು ಪತ್ತೆ ಮಾಡಲಾಗುವುದು ಎಂದು ತಿಳಿಸಿದರು.
ವೈದ್ಯಾಧಿಕಾರಿಗಳು ಈಗಾಗಲೇ ಆ ಕೆಲಸದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಸಿಎಂ ನೇತೃತ್ವದಲ್ಲಿ ಸಭೆ ನಡೆಸಿ, ಸಲಹೆ-ಸೂಚನೆ ಕೊಟ್ಟಿದ್ದಾರೆ ಎಂದ ಅವರು, ಹೊಸ ವರ್ಷಾಚರಣೆ ಕುರಿತು ಈಗಲೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ, ಪರಿಸ್ಥಿತಿಗಳು ತುಂಬಾ ವೇಗವಾಗಿ ಬದಲಾಗುತ್ತಿವೆ. ಕೋವಿಡ್ ಭೀತಿ ಇಲ್ಲದಿದ್ದರೆ ಎಲ್ಲವೂ ಸಾಮಾನ್ಯವಾಗಿರುತ್ತದೆ ಎಂದು ಹೇಳಿದರು.
ಮಾಸ್ಕ್ ನಿಯಮ ಇಂದಿಗೂ ಜಾರಿಯಲ್ಲಿದೆ. 54 ಮಾರ್ಷಲ್ಸ್ ತಂಡ ಈ ಬಗ್ಗೆ ನಿಗಾವಹಿಸುತ್ತದೆ . ಇನ್ನು ನಾಳೆ ತಜ್ಞರ ಸಮಿತಿ ಜೊತೆ ರಾಜ್ಯ ಸರ್ಕಾರ ಸಭೆ ನಡೆಸಲಿದೆ. ಬಿಬಿಎಂಪಿಯೂ ಪಾಲ್ಗೊಳ್ಳಲಿದೆ. ನಗರದಲ್ಲಿ ಏನೇನು ಕಡಿವಾಣಗಳನ್ನು ಹಾಕಬೇಕು ಎಂಬ ಬಗ್ಗೆ ಸರ್ಕಾರದ ಸೂಚನೆಯಂತೆ ನಡೆಯಲಾಗುವುದು.
ಅಂತಾರಾಷ್ಟ್ರೀಯ ಪ್ರಯಾಣಗಳ ಬಗ್ಗೆ ತೀವ್ರವಾದ ನಿಗಾ ವಹಿಸಬೇಕಾಗುತ್ತದೆ. ಏರ್ಪೋರ್ಟ್‌ನಿಂದ ಬರುವ ಎಲ್ಲರ ಟೆಸ್ಟ್ ಮಾಡಲಾಗುತ್ತಿದೆ. ಪಾಸಿಟಿವ್ ಬಂದರೆ ಜೀನೋಮ್ ಸೀಕ್ವೆನ್ಸಿಂಗ್ ಕೂಡ ಮಾಡಲಾಗುವುದು ಎಂದು ವಿವರಿಸಿದರು.
ಹೊಸ ವೈರಸ್ ತಳಿಯ ರೋಗಲಕ್ಷಣಗಳ ಬಗ್ಗೆ, ಹರಡುವಿಕೆಯ ಬಗ್ಗೆ ಮುಂದಿನ ನಾಲ್ಕೈದು ದಿನಗಳಲ್ಲಿ ಸ್ಪಷ್ಟ ಚಿತ್ರಣ ಬರಬಹುದು. ನಂತರ ಹೊಸ ವರ್ಷದ ಸಂಭ್ರಮ, ಇತರೆ ಹಬ್ಬಗಳ ಆಚರಣೆಗೆ ಅನುಮತಿ ನೀಡಲಾಗುವುದು ಎಂದರು.