ಬೆಂಗಳೂರು: ಕೊರೊನಾ ಬಿಕ್ಕಟ್ಟು ಪರಿಣಾಮ ಡಿಜಿಟಲ್ ತಂತ್ರಜ್ಞಾನಕ್ಕೆ ಒತ್ತು ನೀಡಲು ಮುಂದಾಗಿರುವ ನಗರ ಸಂಚಾರ ಪೊಲೀಸರು ತಪಾಸಣೆ ವೇಳೆ ವಾಹನ ದಾಖಲಾತಿ ಭೌತಿಕವಾಗಿ ತೋರಿಸಬೇಕೆಂಬ ನಿಯಮ ಸಡಿಲಗೊಳಿಸಿದ್ದಾರೆ. ಡಿಜಿ ಲಾಕರ್ ಮತ್ತು ಎಂಪರಿವಾಹನ್ ಮೊಬೈಲ್ ಆ್ಯಪ್ಗಳಲ್ಲಿ ಡ್ಯಾಕುಮೆಂಟ್ಗಳನ್ನು ತೋರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.
ವಾಹನ ಸವಾರರಿಗೆ ಎಲ್ಲಾ ಸಮಯದಲ್ಲಿಯೂ ವಾಹನ ಚಾಲನೆ ವೇಳೆ ಅಗತ್ಯ ದಾಖಲಾತಿಗಳನ್ನು ಭೌತಿಕವಾಗಿ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿರಲಿಲ್ಲ. ದಾಖಲಾತಿ ನಕಲಿ ಪ್ರತಿ ತೋರಿಸಿದರೆ ಪೊಲೀಸರು ಸವಾರರೊಂದಿಗೆ ಕಿರಿಕಿರಿ ಮಾಡುತ್ತಿದ್ದರು. ಮುಂದಿನ ದಿನಗಳಲ್ಲಿ ಇಂತಹ ಕಿರಿಕಿರಿ ತಪ್ಪಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಕಳೆದ ಎರಡು ವರ್ಷಗಳ ಹಿಂದೆ ಜಾರಿ ತಂದಿದ್ದ ಡಿಜಿ ಲಾಕರ್ ಆ್ಯಪ್ ಹಾಗೂ ಎಂಪರಿವಾಹನ್ ಆ್ಯಪ್ಗಳಲ್ಲಿ ದಾಖಲಾತಿ ಇಟ್ಟುಕೊಂಡ ಸವಾರರಿಗೆ ಪ್ರಶ್ನಿಸಿದಂತೆ ಸಂಚಾರ ಪೊಲೀಸರಿಗೆ ಸಂಚಾರಿ ವಿಭಾಗದ ಪೊಲೀಸ್ ಕಮಿಷನರ್ ಡಾ.ಬಿ.ಆರ್.ರವಿಕಾಂತೇಗೌಡ ತಾಕೀತು ಮಾಡಿದ್ದಾರೆ.
ಡಿಜಿಟಲ್ ಲಾಕರ್ನಲ್ಲಿ ಏನೆಲ್ಲಾ ಇಡಬಹುದು:
ಸಂಪರ್ಕ ರಹಿತ ವ್ಯವಸ್ಥೆಗೆ ಪ್ರೋತ್ಸಾಹ ನೀಡುತ್ತಿರುವ ಸಂಚಾರ ಪೊಲೀಸರು ಎರಡು ದಿನಗಳ ಹಿಂದಷ್ಟೇ ಪೇಟಿಎಂ ಮೂಲಕ ದಂಡ ಪಾವತಿಸಲು ಸವಾರರಿಗೆ ಅನುವು ಮಾಡಿದ್ದರು. ಇದರ ಬೆನ್ನಲೇ ವಾಹನ ಚಾಲಕರು ಡಿಜಿಟಲ್ ಲಾಕರ್ ಹಾಗೂ ಎಂಪರಿವಾಹನ್ ಯಾವುದಾದರೂ ಒಂದು ಆ್ಯಪ್ ಡೌನ್ಲೋಡ್ ಮಾಡಿಕೊಂಡು ಡಿಜಿಟಲ್ ದಾಖಲೆ ಇಟ್ಟುಕೊಳ್ಳಬಹುದಾಗಿದೆ.
ನೋಂದಣಿ ಪ್ರಮಾಣ ಪತ್ರ (ಆರ್.ಸಿ) ಚಾಲನ ಪರವಾನಗಿ (ಡಿಎಲ್) ಇನ್ಸುರೆನ್ಸ್, ಫಿಟ್ನೆಸ್ ಪ್ರಮಾಣಪತ್ರ ಹಾಗೂ ವಾಯುಮಾಲಿನ್ಯ ಪ್ರಮಾಣ ಪತ್ರ ಸೇರಿದಂತೆ ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಡಿಜಿಟಲ್ ಮಾದರಿಯಲ್ಲಿ ಇಡಬಹುದಾಗಿದೆ.ಸ್ಮಾರ್ಟ್ ಮೊಬೈಲ್ ಫೋನ್ನಲ್ಲಿಯೇ ಎಲ್ಲಾ ದಾಖಲೆಗಳನ್ನು ಸ್ಟೋರ್ ಮಾಡಿಕೊಡುವ ವ್ಯವಸ್ಥೆ ಇದಾಗಿದ್ದು, ಪೊಲೀಸರು ಕೇಳಿದಾಗ ಡಿಜಿ ಲಾಕರ್ ಆ್ಯಪ್ ತೋರಿಸಬಹುದಾಗಿದೆ.
ಡೌನ್ಲೋಡ್ ಮಾಡಿಕೊಳ್ಳೋದು ಹೇಗೆ ?
ವಾಹನ ಸವಾರರು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಿಕೊಂಡು ನಂತರ ಆ್ಯಪ್ ತೆರೆದು ಮೊಬೈಲ್ ಸಂಖ್ಯೆ ಬಳಸಿ ಲಾಗಿನ್ ಆಗಬೇಕು. ನಂತರ ಆಧಾರ್ ಸಂಖ್ಯೆ ನಮೂದಿಸಿ ನಂತರ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯ ಆಯ್ಕೆ ಮಾಡಿಕೊಂಡ ನಿರ್ದಿಷ್ಟ ಹೆಸರಿನಲ್ಲಿ ದಾಖಲೆಗಳನ್ನು ಸೇವ್ ಮಾಡಿಕೊಳ್ಳಬಹುದಾಗಿದೆ.
ಪೇಟಿಎಂ ನಲ್ಲಿ 3 ಲಕ್ಷ ದಂಡ, 56 ಲಕ್ಷ ಜನರು ವೀಕ್ಷಣೆ:
ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಸಲು ಮೊದಲು ಬೆಂಗಳೂರು ಒನ್, ಸಂಚಾರಿ ಇಲಾಖೆಯ ವೆಬ್ ಸೈಟ್ಗಳ ಮೂಲಕ ದಂಡ ಪಾವತಿ ವ್ಯವಸ್ಥೆಯಿತ್ತು. ಸಾರ್ವಜನಿಕ ವಲಯದಲ್ಲಿ ಬಹುಬಳಕೆಯಲ್ಲಿರುವ ಪೇಟಿಎಂ ಮೂಲಕ ದಂಡ ಕಟ್ಟಲು ಎರಡು ದಿನಗಳ ಹಿಂದೆ ಪೊಲೀಸರು ಅವಕಾಶ ಕಲ್ಪಿಸಿದ್ದರು. ಇದಕ್ಕೆ ಸೂಕ್ತ ಸ್ಪಂದನೆ ವ್ಯಕ್ತವಾಗಿದ್ದು ಟ್ರಾಫಿಕ್ ವೈಲೆಷನ್ ಮಾಡಿದ್ದ ಸವಾರರು ಪೇಟಿಎಂ ಮೂಲಕ 3 ಲಕ್ಷ ದಂಡ ಕಟ್ಟಿದ್ದಾರೆ. ಅಲ್ಲದೆ 56 ಲಕ್ಷ ಜನರು ಆ್ಯಪ್ಗೆ ಹೋಗಿ ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ವೀಕ್ಷಣೆ ಮಾಡಿದ್ದಾರೆ ಎಂದು ರವಿಕಾಂತೇಗೌಡ ತಿಳಿಸಿದ್ದಾರೆ.