ಬೆಂಗಳೂರು: ಹೊಸ ತಾಲೂಕುಗಳಿಗೆ 2 ವರ್ಷದವರೆಗೆ ಅಗತ್ಯ ಹುದ್ದೆಗಳನ್ನು ಸೃಷ್ಟಿಸಲು ಆರ್ಥಿಕ ಇಲಾಖೆ ನಿರಾಕರಿಸಿದೆ.
2017-18ರಲ್ಲಿ ರಾಜ್ಯ ಬಜೆಟ್ನಲ್ಲಿ ಘೋಷಿಸಿರುವಂತೆ ಹೊಸ 49 ತಾಲೂಕುಗಳನ್ನು ರಚಿಸಲಾಗಿತ್ತು. ಹೊಸ ತಾಲೂಕು ಕಚೇರಿಗಳಿಗೆ ಬೇಕಾದ ಅಗತ್ಯ ಹುದ್ದೆಗಳನ್ನು ಸೃಷ್ಟಿಸುವಂತೆ ಸಮಾಜ ಕಲ್ಯಾಣ ಇಲಾಖೆ ಪ್ರಸ್ತಾಪ ಸಲ್ಲಿಸಿತ್ತು. ಮೇ 10ಕ್ಕೆ ಸಮಾಜ ಕಲ್ಯಾಣ ಇಲಾಖೆ ಈ ಪ್ರಸ್ತಾಪವನ್ನು ಆರ್ಥಿಕ ಇಲಾಖೆಗೆ ಸಲ್ಲಿಸಿತ್ತು. ಆದರೆ ಇದೀಗ ಆರ್ಥಿಕ ಇಲಾಖೆ ಅಗತ್ಯ ಹುದ್ದೆಗಳನ್ನು ಸೃಷ್ಟಿಸುವ ಸಂಬಂಧ, ಸದ್ಯಕ್ಕೆ ಅನುಮೋದನೆ ನೀಡಲು ನಿರಾಕರಿಸಿದೆ. 2 ವರ್ಷಗಳವರೆಗೆ ಹಳೆಯ ತಾಲೂಕುಗಳ ಸಿಬ್ಬಂದಿಯನ್ನೇ ಬಳಸುವಂತೆ ನಿರ್ದೇಶನ ನೀಡಿದೆ. 2 ವರ್ಷದ ಬಳಿಕ ಅಗತ್ಯ ಹುದ್ದೆಗಳನ್ನು ಸೃಷ್ಟಿಸುವ ಬಗ್ಗೆ ಪ್ರಸ್ತಾಪ ಸಲ್ಲಿಸುಂತೆ ಸೂಚನೆ ನೀಡಿದೆ.
ಪ್ರತಿ ತಾಲೂಕು ಪಂಚಾಯಿತಿಗೆ ವಿವಿಧ ವೃಂದದ 14 ಹುದ್ದೆಗಳಂತೆ 49 ತಾಲೂಕು ಪಂಚಾಯಿತಿಗಳಿಗೆ ಸುಮಾರು 500 ಹುದ್ದೆಗಳ ಅಗತ್ಯ ಇದೆ. ಪ್ರಮುಖವಾಗಿ ಕಾರ್ಯನಿರ್ವಾಹಕ ಅಧಿಕಾರಿಗಳು, ವಾಹನ ಚಾಲಕರು, ಗ್ರೂಪ್ ಡಿ ಹುದ್ದೆಗಳನ್ನು ಸೃಷ್ಟಿಸುವ ಅಗತ್ಯವಿದೆ.