ಬೆಂಗಳೂರು: ಕೆಆರ್ಎಸ್ನಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರ ಪ್ರತಿಮೆ ನಿರ್ಮಿಸಬಾರದೆಂದು ಇತಿಹಾಸ ತಜ್ಞ ನಂಜರಾಜ ಅರಸ್ ನೇತೃತ್ವದ ನಿಯೋಗ ಸಿಎಂಗೆ ಮನವಿ ಮಾಡಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಭೇಟಿ ಮಾಡಿದ ನಿಯೋಗ, ಕೆಆರ್ಎಸ್ನಲ್ಲಿ ನಾಲ್ವಡಿ ಕೃಷ್ಣಾರಾಜ ಒಡೆಯರ್ ಅವರ ಪ್ರತಿಮೆ ಮಾತ್ರ ನಿರ್ಮಾಣ ಮಾಡಿ. ಆದರೆ ಯಾವುದೇ ಕಾರಣಕ್ಕೂ ಅವರ ಜೊತೆ ವಿಶ್ವೇಶ್ವರಯ್ಯನವರ ಪ್ರತಿಮೆ ನಿರ್ಮಿಸಬಾರದು ಎಂದು ಒತ್ತಾಯಿಸಿದೆ.
ವಿಶ್ವೇಶ್ವರಯ್ಯನವರು ಕೇವಲ ದಿವಾನರು ಹಾಗೂ ಮುಖ್ಯ ಇಂಜಿನಿಯರ್ ಆಗಿದ್ರು ಅಷ್ಟೇ. ಅಂಥ ವ್ಯಕ್ತಿಗೆ ನಮ್ಮ ಕೃಷ್ಣರಾಜ ಒಡೆಯರ್ ಸರಿಸಮಾನವಾಗಿ ಪ್ರತಿಮೆ ನಿರ್ಮಿಸುವುದು ಬೇಡ ಎಂದು ಸಿಎಂಗೆ ಮನವಿ ಪತ್ರ ನೀಡಿದರು.
ಸ್ಪಷ್ಟವಾಗಿ ಹೇಳುವುದಾದರೆ ಮಹಾರಾಜರ ಸ್ಥಾನಮಾನವನ್ನು, ವರ್ಚಸ್ಸನ್ನು, ಶಿಷ್ಟಾಚಾರ ಸಂಹಿತೆಯನ್ನು ಪರಿಗಣಿಸಿ ಕಟ್ಟೆಯ ನಿರ್ಮಾತೃ ಮಹಾರಾಜರೊಬ್ಬರ ಪುತ್ಥಳಿಯೊಂದನ್ನು ಮಾತ್ರ ಕನ್ನಂಬಾಡಿ ಕಟ್ಟೆ ಆವರಣದಲ್ಲಿ ಸ್ಥಾಪಿಸಿ, ಗೌರವಿಸಿ. ಮಹಾರಾಜರನ್ನು ಗೌರವಿಸದಿದ್ದರೆ ಚಿಂತೆಯಿಲ್ಲ. ದಯವಿಟ್ಟು ಮಹಾರಾಜರನ್ನು, ಅವರ ಕೊಡುಗೆಯನ್ನು, ಅವರ ಸಂಸ್ಕೃತಿಯನ್ನು, ಅವರ ಪರಂಪರೆಯನ್ನು ಮತ್ತು ಅವರ ಇತಿಹಾಸವನ್ನು ಅಗೌರವಿಸಬೇಡಿ. ಮಹಾರಾಜರ ಪುತ್ಥಳಿಯನ್ನು ಕನ್ನಂಬಾಡಿ ಕಟ್ಟೆಯ ಆವರಣದಲ್ಲಿ ಸ್ಥಾಪಿಸದಿದ್ದರೆ ದುಃಖವಿಲ್ಲ, ಮಹಾರಾಜರಿಗೆ ಅವಮಾನ ಮಾತ್ರ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಮಹಾರಾಜರ ಮಾನ ಮತ್ತು ಗೌರವ ಇಂದು ನಿಮ್ಮ ಕೈಲಿದೆ. 'ಹಾಲಲ್ಲಾದರೂ ಹಾಕಿ, ನೀರಲ್ಲಾದರೂ ಹಾಕಿ, ಇದು ನಿಮಗೆ ಬಿಟ್ಟಿದ್ದು ಎಂದು ಮನವಿ ಮಾಡಿದ್ದಾರೆ. ನಂಜರಾಜ ಅರಸ್ ನಿಯೋಗದಲ್ಲಿ ಕೊಳ್ಳೆಗಾಲ ಶಾಸಕ ಎನ್. ಮಹೇಶ್ ಮತ್ತು ಎಚ್. ವಿಶ್ವನಾಥ್ ಇದ್ದರು.