ಬೆಂಗಳೂರು: ರಾಜ್ಯಪಾಲರ ಭೇಟಿಗೆ ಅವಕಾಶ ಸಿಗದೆ ಧರಣಿಗೆ ವಾಪಸಾದ ಮಹದಾಯಿ ಹೋರಾಟಗಾರರು ನಮಗೆ ಯಾವುದೇ ರಾಜಕೀಯ ಪಕ್ಷಗಳ ಬೆಂಬಲ ಅಗತ್ಯ ಇಲ್ಲ. ನಮ್ಮ ಧರಣಿಗೆ ಯಾರ ಬೆಂಬಲವೂ ಬೇಡವೆಂದು ರೈತ ಮುಖಂಡ ವೀರೇಶ್ ಸೊಬರದಮಠ ಹೇಳಿದ್ದಾರೆ.
ಇಂದು ಮಧ್ಯಾಹ್ನ 3:30 ರ ವೇಳೆಗೆ ರಾಜಭವನಕ್ಕೆ ರೈತರನ್ನು ಕರೆದೊಯ್ಯಲಾಯಿತು. ಆದ್ರೆ ರೈತರ ಮನವಿಯನ್ನು ರಾಜ್ಯಪಾಲರು ಸ್ವೀಕರಿಸದೆ, ಅಧಿಕಾರಿಗಳು ಸ್ವೀಕರಿಸಲು ಬಂದಾಗ, ರೈತರು ಅದನ್ನು ತಿರಸ್ಕರಿಸಿದರು. ನಮ್ಮ ಮನವಿಯನ್ನು ಖುದ್ದು ರಾಜ್ಯಪಾಲರೇ ಸ್ವೀಕರಿಸಬೇಕೆಂದು ಪಟ್ಟು ಹಿಡಿದಿದ್ದಾರೆ.
ಇನ್ನು, ಮಹದಾಯಿ ಹೋರಾಟಗಾರರನ್ನು ಬೆಳಗ್ಗೆಯಿಂದ ಕಾಂಗ್ರೆಸ್ ಮುಖಂಡರಾದ ವಿ.ಎಸ್. ಉಗ್ರಪ್ಪ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರೈಲ್ವೆ ನಿಲ್ದಾಣಕ್ಕೆ ಬಂದು ಭೇಟಿ ಮಾಡಿ ಹೋರಾಟಕ್ಕೆ ನಮ್ಮ ಬೆಂಬಲವೂ ಇದೆ ಎಂದಿದ್ದರು. ಇದನ್ನು ತೀವ್ರವಾಗಿ ಖಂಡಿಸಿದ ವೀರೇಶ್ ಸೊಬರದಮಠ, ನಮಗೆ ರಾಜಕೀಯ ಪಕ್ಷಗಳ ಮೇಲೆ ಯಾವುದೇ ನಂಬಿಕೆ ಉಳಿದಿಲ್ಲ. ಯಾರ ಬೆಂಬಲವೂ ಬೇಕಾಗಿಲ್ಲ. ನಾವು ಕೇವಲ ರಾಜ್ಯಪಾಲರನ್ನು ಭೇಟಿಯಾಗಬೇಕಿದ್ದು, ಈ ಹೋರಾಟವನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದು ಖಡಕ್ ಆಗಿ ಹೇಳಿದ್ದಾರೆ.