ಬೆಂಗಳೂರು: ರಾಜ್ಯದಲ್ಲಿ ಶಾಲಾ-ಕಾಲೇಜುಗಳ ಆರಂಭಕ್ಕೆ ಆತುರದ ನಿರ್ಧಾರ ಕೈಗೊಂಡರೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಸಮುದಾಯದ ಮಾರಣಹೋಮಕ್ಕೆ ನಾಂದಿ ಹಾಡಿದಂತಾಗುತ್ತದೆ. ಇಂತಹ ಯಾವುದೇ ನಿರ್ಧಾರ ತಕ್ಷಣ ಕೈಗೊಳ್ಳಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಶಾಲಾ-ಕಾಲೇಜುಗಳ ಆರಂಭಕ್ಕೆ ಶಿಕ್ಷಕ ಸಮುದಾಯ, ಶಾಲಾಭಿವೃದ್ಧಿ ಉಸ್ತುವಾರಿ ಸಮಿತಿ (ಎಸ್‍ಡಿಎಂಸಿ) ಹಾಗೂ ಪೋಷಕರ ಅಭಿಪ್ರಾಯವನ್ನು ರಾಜ್ಯ ಸರ್ಕಾರ ಸಂಗ್ರಹಿಸುತ್ತಿರುವುದೇನೋ ಸರಿ. ಆದರೆ, ಅತಿರೇಕದ ನಿರ್ಧಾರ ಅನಾಹುತಕ್ಕೆ ದಾರಿಯಾಗುತ್ತದೆ ಎಚ್ಚರ ಎಂದಿದ್ದಾರೆ.
ನೆರೆಯ ಆಂಧ್ರಪ್ರದೇಶದಲ್ಲಿ ಶಾಲೆ ಆರಂಭವಾದ ಮೂರೇ ದಿನದಲ್ಲಿ 260ಕ್ಕೂ ಹೆಚ್ಚು ಮಕ್ಕಳು ಹಾಗೂ 160 ಕ್ಕೂ ಹೆಚ್ಚು ಶಿಕ್ಷಕರಿಗೆ ಕೊರೊನಾ ಸೋಂಕು ತಗುಲಿರುವ ವರದಿ ತೀವ್ರ ಆತಂಕಕಾರಿ ಬೆಳವಣಿಗೆ. ಇದು ರಾಜ್ಯದಲ್ಲಿ ಪೋಷಕರ ಜಂಘಾಬಲವನ್ನೇ ಉಡುಗಿಸಿದೆ. ಸರ್ಕಾರ ಜನಾಭಿಪ್ರಾಯ ಸಂಗ್ರಹಿಸಲಿ. ಆದರೆ, ವಿದ್ಯಾರ್ಥಿಗಳು ಮತ್ತು ಶಿಕ್ಷಕ ಸಮುದಾಯದ ಪ್ರಾಣದೊಂದಿಗೆ ಚೆಲ್ಲಾಟವಾಡುವುದನ್ನು ಯಾವುದೇ ಕಾರಣಕ್ಕೂ ನಾಗರಿಕ ಸಮಾಜ ಒಪ್ಪದು. ಈ ಹಿಂದೆಯೇ ಸರ್ಕಾರಕ್ಕೆ ಶಾಲಾ-ಕಾಲೇಜುಗಳನ್ನು ಆರಂಭಿಸುವುದು ಬೇಡ ಎಂದು ಸಲಹೆ ನೀಡಿದ್ದೆ ಎಂದು ತಿಳಿಸಿದ್ದಾರೆ.
ಮದ್ದಿಲ್ಲದ ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಇಂತಹ ಕಾಲಘಟ್ಟದಲ್ಲಿ ಶಾಲಾ-ಕಾಲೇಜುಗಳನ್ನು ಆರಂಭಿಸುವ ನಿರ್ಧಾರದಿಂದ ಹಿಂದೆ ಸರಿಯಲೇಬೇಕು. ಇಲ್ಲದಿದ್ದರೆ ಸರ್ಕಾರವೇ ಮುಂದಿನ ಎಲ್ಲಾ ಅನಾಹುತಗಳ ಹೊಣೆ ಹೊರಬೇಕಾಗುತ್ತದೆ ಎಂದು ಹೆಚ್ಡಿಕೆ ಹೇಳಿದ್ದಾರೆ.
ಶಾಲಾ-ಕಾಲೇಜು ಆರಂಭಿಸುವ ವಿಚಾರದಲ್ಲಿ ಮಾತ್ರ ಸರ್ಕಾರ ಮೈಯೆಲ್ಲ ಕಣ್ಣಾಗಿರಬೇಕು. ಈಗ ಶಾಲಾ-ಕಾಲೇಜು ಆರಂಭಿಸುವ ಉಮೇದಿಯಿಂದ ಸರ್ಕಾರ ಹಿಂದೆ ಸರಿಯಬೇಕೆಂದು ಅವರು ಆಗ್ರಹಿಸಿದ್ದಾರೆ.