ಬೆಂಗಳೂರು: ಇನ್ನು ಮುಂದೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿದಾರರು ಸ್ವಾಧೀನ ಪತ್ರ ನೀಡುವ ಅಗತ್ಯ ಇಲ್ಲ. ಈ ನಿಟ್ಟಿನಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ನಿಯಮಕ್ಕೆ ತಿದ್ದುಪಡಿ ತಂದಿದ್ದು, ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಆ ಮೂಲಕ ರಾಜ್ಯದ ಜನರಿಗೆ ಗುಡ್ ನ್ಯೂಸ್ ನೀಡಿದೆ.
ವಿದ್ಯುತ್ ಸಂಪರ್ಕಕ್ಕಾಗಿ ಸ್ವಾಧೀನ ಪತ್ರ (OC) ನೀಡುವ ನಿಯಮವನ್ನು ರದ್ದುಗೊಳಿಸುವಂತೆ ಸಾರ್ವಜನಿಕರು ಹಾಗೂ ಕೈಗಾರಿಕೋದ್ಯಮಿಗಳಿಂದ ಸಾಕಷ್ಟು ಒತ್ತಾಯ ಇತ್ತು. ಇದೀಗ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ ಸಿ) ಈ ಸಂಬಂಧ ನಿಯಮಗಳಿಗೆ ತಿದ್ದುಪಡಿ ತಂದ್ದಿದ್ದು, ವಿದ್ಯುತ್ ಸಂಪರ್ಕಕ್ಕಾಗಿ ಸ್ವಾಧೀನಪತ್ರ ನೀಡುವ ಅಂಶವನ್ನು ರದ್ದುಗೊಳಿಸಿದೆ. ಇದೀಗ ಸ್ವಾಧೀನ ಪತ್ರ ಹೊಂದಿಲ್ಲದವರೂ ವಿದ್ಯುತ್ ಸಂಪರ್ಕ ಪಡೆಯಬಹುದಾಗಿದೆ.
ಓದಿ: ರೈತರಿಗೆ ರಿಯಾಯಿತಿ ದರದಲ್ಲಿ ಸೋಲಾರ್ ಪಂಪ್ಸೆಟ್ ವಿತರಿಸಲು ನಿರ್ಧಾರ: ಸಚಿವ ವಿ. ಸುನೀಲ್ ಕುಮಾರ್
ಈ ಮುಂಚಿನ ನಿಯಮದಂತೆ ವಿದ್ಯುತ್ ಸಂಪರ್ಕ ಬೇಕಾದವರು ಎಸ್ಕಾಂಗಳಿಗೆ ಗುರುತು ಪ್ರಮಾಣಪತ್ರ, ಮಾಲಿಕತ್ವದ ಪ್ರಮಾಣಪತ್ರ ಹಾಗೂ ಸ್ವಾಧೀನ ಪತ್ರವನ್ನು ನೀಡಬೇಕಾಗಿತ್ತು. ಇದೀಗ ನಿಯಮಕ್ಕೆ ತಿದ್ದುಪಡಿ ತಂದ ಹಿನ್ನೆಲೆ ಇನ್ಮುಂದೆ ಅರ್ಜಿದಾರರು ಗುರುತು ಪ್ರಮಾಣಪತ್ರ, ಮನೆ ಮಾಲೀಕತ್ವದ ಪ್ರಮಾಣ ಪತ್ರ ಸಲ್ಲಿಸಿದರೆ ಸಾಕು.
ಈ ತಿದ್ದುಪಡಿ ನಿಯಮ ಗೃಹ ಹಾಗೂ ವಾಣಿಜ್ಯ ಕಟ್ಟಡದ ಅರ್ಜಿದಾರಿಗೂ ಅನ್ವಯವಾಗಲಿದೆ. ಒಸಿ ನೀಡುವ ನಿಯಮವನ್ನು ರದ್ದುಗೊಳಿಸಲು ಕೋರಿ ಎಸ್ಕಾಂಗಳು ಕೆಇಆರ್ಸಿಗೆ ಪ್ರಸ್ತಾವನೆ ಸಲ್ಲಿಸಿದ್ದವು. ಇತ್ತ ಸರ್ಕಾರವೂ ಒಸಿ ನಿಯಮ ತೆರವು ಮಾಡುವಂತೆ ಕೋರಿತ್ತು. ಈ ಸಂಬಂಧ ಕೆಇಆರ್ಸಿ ಸಾರ್ವಜನಿಕ ಅಹವಾಲು ನಡೆಸಿದ ಬಳಿಕ ಇದೀಗ ವಿದ್ಯುತ್ ಸಂಪರ್ಕ ಕೋರಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಗುಡ್ ನ್ಯೂಸ್ ನೀಡಿದೆ.