ಬೆಂಗಳೂರು : ಯಾವುದೇ ಲಾಕ್‌ಡೌನ್, ನೈಟ್ ಕರ್ಫ್ಯೂ, ಹಗಲು ಕರ್ಫ್ಯೂನೂ ಇಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಣೆ ನೀಡಿದ್ದಾರೆ.
ಪ್ರಧಾನಿ ಜೊತೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರು ಯಾವುದೇ ಆತಂಕಕ್ಕೊಳಗಾಗುವುದು ಬೇಡ. ಸಾರ್ವಜನಿಕ ಸಭೆ, ಸಮಾರಂಭಕ್ಕೆ ಯಾವುದೇ ನಿರ್ಬಂಧ ಇಲ್ಲ. ಆದರೆ, ಇಂಡೋರ್ ಕಾರ್ಯಕ್ರಮಗಳಿಗೆ ನಿರ್ಬಂಧಿಸಲಾಗುತ್ತದೆ.
ಮಾಸ್ಕ್ ಕಡ್ಡಾಯವಾಗಿ ಹಾಕಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಯಾವುದೇ ಹೊಸ ಮಾರ್ಗಸೂಚಿ ಹೊರಡಿಸಲ್ಲ. ಈಗಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದಿದ್ದಾರೆ. ಪ್ರಧಾನಿಯವರು ವಿಡಿಯೋ ಕಾನ್ಫರೆನ್ಸ್ ವೇಳೆ ಲಸಿಕೆ ಹಾಕುವುದನ್ನು ಹೆಚ್ಚಳ ಮಾಡುವಂತೆ ಸೂಚಿಸಿದ್ದಾರೆ.
ಜನರಲ್ಲಿ ಭಯ ಸೃಷ್ಟಿಸುವ ಅಗತ್ಯ ಇಲ್ಲ. ಲಸಿಕೆ ತಯಾರಿಕೆಗೆ ಎಲ್ಲ ಅವಕಾಶಗಳ ಬಳಕೆಗೆ ರಾಜ್ಯಗಳು ಸಹಕಾರ ಕೊಡಿ. ಪರೀಕ್ಷೆಗಳ ಸಂಖ್ಯೆ ಹೆಚ್ಚಳ ಮಾಡುವಂತೆ ತಿಳಿಸಿದ್ದಾರೆ. ಮಾಸ್ಕ್ ಹಾಕುವುದನ್ನು ಕಡ್ಡಾಯ ಮಾಡುವುದು, ಸೋಂಕು ಹೆಚ್ಚಳ ಇರುವ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾವಹಿಸುವಂತೆ ಪ್ರಧಾನಿ ಸೂಚನೆ ನೀಡಿದರು ಎಂದು ಸಿಎಂ ವಿವರಿಸಿದರು.
ರಾಜ್ಯದಲ್ಲಿ ಕಳೆದ ಹತ್ತು ದಿನಗಳಲ್ಲಿ ಕೊರೊನಾ ಪ್ರಕರಣ ಏರಿಕೆಯಾಗಿವೆ. ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ ಪರೀಕ್ಷೆ ಹೆಚ್ಚಳ ಮಾಡಲು ನಿರ್ಧರಿಸಲಾಗುವುದು. ಜನ ಸೇರುವ ಕಡೆ ಮುನ್ನೆಚ್ಚರಿಕೆಗೆ ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ 3 ಕೋವಿಡ್ ಕೇರ್ ಸೆಂಟರ್ಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದರು.
ಓದಿ:ಟೆಸ್ಟಿಂಗ್ ಹೆಚ್ಚಿಸಿ, ಜನರು ಆತಂಕಗೊಳ್ಳದಂತೆ ತಕ್ಷಣ ಕ್ರಮ ಕೈಗೊಳ್ಳಿ: ಸಿಎಂಗಳಿಗೆ ಮೋದಿ ಮಹತ್ವದ ಸೂಚನೆ
ಮೂರನೇ ಹಂತದ ಪಟ್ಟಣಗಳಲ್ಲಿ ಟೆಸ್ಟಿಂಗ್ ಹೆಚ್ಚಳಕ್ಕೆ ಪಿಎಂ ಸೂಚಿಸಿದ್ದಾರೆ. ಮೈಕ್ರೋ ಕಂಟೇನ್ಮೆಂಟ್ ವಲಯಗಳಲ್ಲಿ ಹೆಚ್ಚಿನ ನಿಗಾವಹಿಸುವಂತೆ ತಿಳಿದಿದ್ದಾರೆ. ಇದೇ ವೇಳೆ ಅಪಾರ್ಟ್ಮೆಂಟ್ ಸೇರಿ ಕೆಲ ನಿರ್ದಿಷ್ಟ ಸ್ಥಳಗಳಲ್ಲಿ ಲಸಿಕೆ ಹಾಕಿಸಲು ಅವಕಾಶ ಕೊಡುವಂತೆ ಮನವಿ ಮಾಡಿದ್ದೇವೆ. ಸದ್ಯ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಲಸಿಕೆ ಹಾಕಲಾಗ್ತಿದೆ. ವೃದ್ಧಾಶ್ರಮ, ಅಪಾರ್ಟ್ಮೆಂಟ್, ದುರ್ಗಮ ಪ್ರದೇಶಗಳಲ್ಲೂ ಲಸಿಕೆ ಅಭಿಯಾನಕ್ಕೆ ಅನುಮತಿ ಕೇಳಿದ್ದೇವೆ ಎಂದರು.
ಪ್ರಕರಣ ಹೆಚ್ಚಿರುವ ಜಿಲ್ಲೆಗಳಲ್ಲಿ ಟೆಸ್ಟಿಂಗ್, ಲಸಿಕೆ ಹೆಚ್ಚಳಕ್ಕೆ ಪಿಎಂ ಸೂಚಿಸಿದ್ದಾರೆ. ರಾಜ್ಯದಲ್ಲಿ 2042 ಆಸ್ಪತ್ರೆಗಳು ಕೋವಿಡ್ ಲಸಿಕೆಗೆ ನೋಂದಾಯಿಸಿಕೊಂಡಿವೆ. ಈ ಪೈಕಿ 1439 ಆಸ್ಪತ್ರೆಗಳಲ್ಲಿ ಲಸಿಕೆ ಅಭಿಯಾನ ಆರಂಭಿಸಿಲ್ಲ. ಈ ಆಸ್ಪತ್ರೆಗಳಲ್ಲೂ ಲಸಿಕೆ ಹಾಕಲು ಕ್ರಮವಹಿಸಲು ಪಿಎಂ ಸೂಚಿಸಿದ್ದಾರೆ. ಶೇ.93ರಷ್ಟು ಆರ್ಟಿಪಿಸಿಆರ್ ಟೆಸ್ಟಿಂಗ್ ಗುರಿ ಸಾಧಿಸಲಾಗಿದೆ.
ಇದಕ್ಕೆ ಕೇಂದ್ರ ಗೃಹ ಸಚಿವರಿಂದ ಶ್ಲಾಘನೆ ಸಿಕ್ಕಿದೆ. ಬೀದರ್, ಕಲಬುರಗಿ, ಬೆಂಗಳೂರು ಜಿಲ್ಲೆಗಳಿಗೆ ಪ್ರತ್ಯೇಕ ಕಾರ್ಯತಂತ್ರ ರೂಪಿಸಲು ಸಲಹೆ ಕೊಟ್ಟಿದ್ದಾರೆ. ಪ್ರತಿ ದಿನ 3 ಲಕ್ಷ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇನ್ನು, ಲಸಿಕೆಗಳು ವ್ಯರ್ಥ ಆಗೋದನ್ನು ತಡೆಯಲು ಸೂಚಿಸಿದ್ದಾರೆ ಎಂದರು.