ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಒಂದೇ ಒಂದು ಐಸಿಯು ಅಥವಾ ವೆಂಟಿಲೇಟರ್ ಸೌಲಭ್ಯದ ಬೆಡ್ ಉಳಿದಿಲ್ಲ. ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲೂ ಲಭ್ಯವಿಲ್ಲ. ಈವರೆಗೆ ಬೆಡ್ ಇದೆ ಎಂದೇ ಹೇಳಿಕೊಂಡು ಬರುತ್ತಿದ್ದ ಅಧಿಕಾರಿಗಳು ಸಹ ಬಹಿರಂಗವಾಗಿ ಬೆಡ್ ಲಭ್ಯ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಕೋವಿಡ್ನಿಂದ ತೀವ್ರ ಉಸಿರಾಟ ಸಮಸ್ಯೆಯಾಗಿ ನಗರದ ಮೂಲೆ ಮೂಲೆಯ ಆಸ್ಪತ್ರೆಗಳಲ್ಲಿ ಬೆಡ್ ಹುಡುಕಿದರೂ ಇಂದು ಒಂದೇ ಒಂದು ಬೆಡ್ ರೋಗಿಗಳಿಗೆ ಸಿಕ್ಕಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಖಾಸಗಿ ಆಸ್ಪತ್ರೆಗಳಿಂದ 7,000 ಬೆಡ್ ಪಡೆಯಲಾಗಿದೆ. 5,600 ಬೆಡ್ ಈಗಾಗಲೇ ಕೊಡಲಾಗಿದೆ. ಉಳಿದ ಬೆಡ್ಗಳು ಖಾಲಿ ಇವೆ.
ಆದರೆ ಐಸಿಯು ಬೆಡ್ ಕೊರತೆ ಇದೆ. ಎಲ್ಲಿಯೂ ಐಸಿಯು ಬೆಡ್ ಲಭ್ಯವಿಲ್ಲ. ಇದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು. ಸಸ್ಯಕ್ಕೆ ಸಾಮಾನ್ಯ ಬೆಡ್ ಮಾತ್ರ ಲಭ್ಯವಿದೆ. ಈಗ 7 ಸಾವಿರದಷ್ಟಿರುವ ಬೆಡ್ಗಳ ಸಂಖ್ಯೆಯನ್ನು 10 ಸಾವಿರಕ್ಕೆ ಏರಿಕೆ ಮಾಡಲಾಗುವುದು. ಮುಂದಿನ 3 ದಿನದಲ್ಲಿ ಇದನ್ನು ಮಾಡಲಾಗುವುದು ಎಂದರು.
ಅಲ್ಲದೆ ಪಾಸಿಟಿವ್ ಆದ ಕೂಡಲೇ ಆಸ್ಪತ್ರೆಗೆ ಹೋಗುವ ಅಗತ್ಯ ಇಲ್ಲ. ಶೇ. 80ರಷ್ಟು ಜನ ಮನೆಯಲ್ಲೇ ಗುಣ ಆಗಬಹುದು. ಅಗತ್ಯ ಇಲ್ಲದವರು ಬೆಡ್ ಪಡೆಯುವುದರಿಂದ ಅಗತ್ಯ ಇರುವವರಿಗೆ ಬೆಡ್ ಅಭಾವ ಉಂಟಾಗುತ್ತದೆ. ಆಸ್ಪತ್ರೆಗೆ ನೇರವಾಗಿ ಹೋಗುವ ಬದಲು ಸಹಾಯವಾಣಿಗೆ ಕರೆ ಮಾಡಿ ಹೋಗಬೇಕು. ತೀವ್ರ ಪರಿಸ್ಥಿತಿಯಲ್ಲಿರುವ ರೋಗಿಗಳನ್ನು ನೇರವಾಗಿ ತೆಗೆದುಕೊಳ್ಳಬೇಕು ಎಂಬ ಮಾರ್ಗಸೂಚಿಯನ್ನೂ ಆಸ್ಪತ್ರೆಗಳಿಗೆ ನೀಡಲಾಗಿದೆ. ಉಳಿದಂತೆ 8 ವಲಯಗಳಿಗೆ ಕೊಟ್ಟಿರುವ ಸಹಾಯವಾಣಿ ಮೂಲಕ ಬೆಡ್ ಬುಕ್ ಮಾಡಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
ಕರ್ಫ್ಯೂ ಅನುಷ್ಠಾನಕ್ಕೆ ಸಿದ್ಧತೆ
ಸರ್ಕಾರ ಕಠಿಣ ನಿಯಮಗಳನ್ನು ಜಾರಿ ಮಾಡಿಯಾಗಿದೆ. ನೈಟ್ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಹಾಗೂ ಸಾಮಾನ್ಯ ದಿನಗಳಲ್ಲಿ ಹಾಕಿರುವ ಕಡಿವಾಣಗಳನ್ನು ಅನುಷ್ಠಾನಕ್ಕೆ ತರಲು ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿ ಜಂಟಿಯಾಗಿ ಕೆಲಸ ಮಾಡಲಿದೆ. ಸರ್ಕಾರಿ ಕಚೇರಿಗಳ ಸಿಬ್ಬಂದಿ ಕಡಿಮೆ ಮಾಡಲು ಮಾರ್ಗಸೂಚಿ ಇದೆ. ಅದನ್ನು ಮಾಡಲಾಗುವುದು ಎಂದರು.
ಏಪ್ರಿಲ್ 23ರಿಂದ ಮಾರುಕಟ್ಟೆ ವಿಕೇಂದ್ರೀಕರಣ
ಮಾರುಕಟ್ಟೆಗಳಲ್ಲಿ ಹೆಚ್ಚಿನ ಜನಸಂದಣಿಯಾಗುವ ಕಾರಣ ಬೇರೆ ಕಡೆಗೆ ಶಿಫ್ಟ್ ಮಾಡಲು ಬಗ್ಗೆ ಈಗಾಗಲೇ ನಿರ್ಧಾರ ಮಾಡಲಾಗಿದೆ. ಏಪ್ರಿಲ್ 23ರಿಂದ ವಿಕೇಂದ್ರೀಕರಣಗೊಳಿಸಲಾಗುವುದು ಎಂದರು.
ಸುಮನಹಳ್ಳಿ ಚಿತಾಗಾರ ಬಂದ್ ಆಗಿದ್ದು, ಇತರ ಚಿತಾಗಾರಗಳ ಮೇಲೂ ಒತ್ತಡ ಹೆಚ್ಚಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತರು, ಚಿತಾಗಾರಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ಹೆಚ್ಚು ಒತ್ತಡ ಬೀಳುತ್ತಿದೆ. ಪಾಲಿಕೆ ವ್ಯಾಪ್ತಿಯ ಹೊರಗಡೆಯಿಂದಲೂ ಮೃತದೇಹಗಳು ಬರುತ್ತಿರುವುದರಿಂದ ಅಲ್ಲಲ್ಲೇ ಅವುಗಳನ್ನು ನಿಭಾಯಿಸಲು ತಿಳಿಸಲಾಗುವುದು ಎಂದರು.
ಹಜ್ ಭವನ್, ಹೆಚ್ಎಎಲ್ ಬಿಟ್ಟರೆ ಉಳಿದ ಕಡೆ ಸಿಸಿಸಿ ಸೆಂಟರ್ನಲ್ಲಿ ಇನ್ನೂ ಹಾಸಿಗೆ ವಿತರಣೆ ಆರಂಭವಾಗಿಲ್ಲ. ಸಿಸಿಸಿ ಸೆಂಟರ್ ಕಳೆದ ವರ್ಷದಂತೆ ಹೆಚ್ಚು ನಿರ್ಮಾಣ ಮಾಡುವ ಅಗತ್ಯ ಇಲ್ಲ ಎಂದರು.
1912 ಸಹಾಯವಾಣಿಗೆ ಒತ್ತಡ ಹೆಚ್ಚಿರುವುದರಿಂದ ಇನ್ನೂ ಹೊಸ 30 ಲೈನ್ಗಳನ್ನು ಸೇರ್ಪಡೆ ಮಾಡಲು ಬೆಸ್ಕಾಂ ಜೊತೆ ಚರ್ಚೆ ಮಾಡಲಾಗಿದೆ. ಅಲ್ಲದೆ ವಲಯಗಳ ವಾರ್ ರೂಂ ನಂಬರ್ ಸಂಪರ್ಕ ಮಾಡಬೇಕು. ಜೊತೆಗೆ ಆ್ಯಂಬುಲೆನ್ಸ್ ಚಾಲಕರಿಗೆ ಪಿಪಿಇ ಕಿಟ್ ಕೊಡುವ ಬಗ್ಗೆ ಅಧಿಕಾರಿಗಳ ಜೊತೆ ಸಮಾಲೋಚಿಸಿ ಸ್ಪಷ್ಟ ನಿರ್ದೇಶನ ನೀಡಲಾಗುವುದು ಎಂದರು.