ಬೆಂಗಳೂರು: ಮುಖ್ಯಮಂತ್ರಿಗಳ ಗೃಹ ಕಚೇರಿ ಹಾಗೂ ಅಧಿಕೃತ ನಿವಾಸಕ್ಕೂ ಕೊರೊನಾ ಸೋಂಕು ತಗುಲುವ ಭೀತಿ ಎದುರಾಗಿದೆ. ಹಾಗಾಗಿ ಕಳೆದ 13 ದಿನಗಳಿಂದ ಕೃಷ್ಣಾ ಹಾಗೂ ಕಾವೇರಿ ಮಾಧ್ಯಮಗಳಿಂದ ದೂರವೇ ಉಳಿದಿವೆ.
ಹೆಚ್ಚು ಕಡಿಮೆ ಕಳೆದ ಎರಡು ವಾರದಿಂದ ಸಿಎಂ ನಿವಾಸ ಹಾಗೂ ಕಚೇರಿಗೆ ಮಾಧ್ಯಮಗಳ ಪ್ರವೇಶವನ್ನು ಅಘೋಷಿತವಾಗಿ ನಿರ್ಬಂಧಿಸಲಾಗಿದೆ. ಏಪ್ರಿಲ್ 21ರ ನಂತರ ಮಾಧ್ಯಮಗಳನ್ನು ಸಿಎಂ ಕಚೇರಿ ಒಳಗೆ ಬಿಟ್ಟಿಲ್ಲ. ಗೃಹ ಕಚೇರಿ ಕೃಷ್ಣಾದಲ್ಲಿ ಸಾಕಷ್ಟು ಸಭೆಗಳು, ವಿಡಿಯೋ ಸಂವಾದಗಳು ನಡೆದರೂ ಅವುಗಳ ವರದಿಗೆ ಮಾಧ್ಯಮಗಳನ್ನು ಆಹ್ವಾನಿಸಿಲ್ಲ. ಕೊರೊನಾ ಸೋಂಕಿನ ಭೀತಿಯಿಂದಾಗಿ ಕೃಷ್ಣಾದಲ್ಲಿನ ಸುದ್ದಿ ಬಗ್ಗೆ ಫೋಟೋ ಹಾಗೂ ವಿಡಿಯೋ ಕ್ಲಿಪ್‌ಗಳನ್ನು ಸಿಎಂ ಕಚೇರಿಯೇ ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿದೆ.
ಲಾಕ್‌ಡೌನ್ ಶುರುವಾದಾಗಿನಿಂದಲೇ ಮಾರ್ಗಸೂಚಿ ಹಾಗೂ ಸಾಮಾಜಿಕ ಅಂತರದ ಪಾಲನೆಯೊಂದಿಗೆ ಸಿಎಂ ಕಚೇರಿಗೆ ಮಾಧ್ಯಮಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಖಾಸಗಿ ವಾಹಿನಿಯ ಛಾಯಾಗ್ರಾಹಕರೊಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ನಂತರ ಎಚ್ಚೆತ್ತುಕೊಂಡ ಸಿಎಂ ಕಚೇರಿ ಮಾಧ್ಯಮಗಳ ಚಿತ್ರೀಕರಣಕ್ಕೆ ಅವಕಾಶ ನೀಡುವ ಬದಲು ಸಭೆಗಳ ಫೋಟೋ ಹಾಗೂ ವಿಡಿಯೋ ಕ್ಲಿಪ್ಪಿಂಗ್ಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲು ಆರಂಭಿಸಿದೆ. ಹಾಗಾಗಿ ಏಪ್ರಿಲ್ 21ರ ನಂತರ ಸಿಎಂ ಕಚೇರಿ ಹಾಗೂ ನಿವಾಸದ ಆವರಣಕ್ಕೆ ಮಾಧ್ಯಮಗಳ ಪ್ರವೇಶಕ್ಕೆ ಬ್ರೇಕ್ ಬಿದ್ದಿದೆ.
ಸಿಎಂ ಕಚೇರಿಯಲ್ಲಿ ನಡೆದ ಸಭೆಗಳ ವಿವರ :
ಏಪ್ರಿಲ್ 22: ಆಪ್ತಮಿತ್ರ ಆ್ಯಪ್ ಬಿಡುಗಡೆ
ಏಪ್ರಿಲ್ 24: ಬಿಜೆಪಿ ನಿಯೋಗದಿಂದ ಸಿಎಂ ಭೇಟಿ, ಪರಿಹಾರ ಕಾರ್ಯದ ವಿವರ ಸಲ್ಲಿಕೆ
ಏಪ್ರಿಲ್ 26 : ಲಂಡನ್ ಕನ್ನಡಿಗರ ಜೊತೆ ವಿಡಿಯೋ ಸಂವಾದ, ಸಮಸ್ಯೆ ಆಲಿಸಿದ ಸಿಎಂ
ಏಪ್ರಿಲ್ 27: ಪ್ರಧಾನಿ ನರೇಂದ್ರ ಮೋದಿ ಜೊತೆ ವಿಡಿಯೋ ಸಂವಾದದಲ್ಲಿ ಭಾಗಿ, ಹೊರ ರಾಜ್ಯದಲ್ಲಿ ಸಿಲುಕಿರುವ ಕಾರ್ಮಿಕರ ಸಹಾಯಕ್ಕೆ ಸ್ಥಾಪಿಸಿರುವ ಸಹಾಯವಾಣಿಗೆ ಸಿಎಂ ಚಾಲನೆ, ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದ,ಆರ್ಥಿಕ ಚಟುವಟಿಕೆ ಪ್ರಾರಂಭಿಸುವ ಕುರಿತು ಸಮಾಲೋಚನೆ
ಏಪ್ರಿಲ್ 28 : ಕೋವಿಡ್ -19 ನಿಧಿಗೆ ಇಂಡಸ್ ಇಂಡ್ ಬ್ಯಾಂಕ್ ಹಾಗೂ ಸಿಪ್ಲಾ ಕಂಪನಿಯಿಂದ ತಲಾ 50 ಲಕ್ಷ ರೂ.ಗಳ ಚೆಕ್ ಸ್ವೀಕಾರ
ಏಪ್ರಿಲ್ 29 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಕ್ರಮೀಕರಣ ಉಪ ಸಮಿತಿ ಸಭೆ
ಎಪ್ರಿಲ್ 30 : ಶಾಸಕ ಚಂದ್ರಪ್ಪ ಅವರಿಂದ ಕೋವುಡ್-19 ನಿಧಿಗೆ ವೈಯುಕ್ತಿಕವಾಗಿ 50 ಲಕ್ಷದ ಚಕ್ ಸ್ವೀಕಾರ
ಮೇ 2: ಒಡಿಶಾ ರಾಜ್ಯದ ವಲಸೆ ಕಾರ್ಮಿಕರ ಕುರಿತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಜೊತೆ ವಿಡಿಯೋ ಸಂವಾದ, ಎಲ್ಲಾ ಜಿಲ್ಲೆಗಳ ಜನ ಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ಜೊತೆ ವಿಡಿಯೋ ಸಂವಾದ, ಆರ್ಥಿಕ ಚಟುವಟಿಕೆ ಆರಂಭಿಸುವ ಕುರಿತು ಚರ್ಚೆ, ಕೊರೊನಾ ಯೋಧರಿಗೆ ಧನ್ಯವಾದ ಅರ್ಪಿಸುವ ವಿಡಿಯೋ ಬಿಡುಗಡೆ.
ಮೊದಲೆಲ್ಲಾ ಇಂತಹ ಕಾರ್ಯಕ್ರಮಗಳ ವಿಡಿಯೋ ಚಿತ್ರೀಕರಣಕ್ಕೆ ಮಾಧ್ಯಮಗಳಿಗೆ ಅವಕಾಶ ನೀಡಲಾಗುತ್ತಿತ್ತು. ಸಭೆಗಳ ನಂತರ ಸಂಬಂಧಪಟ್ಟ ಸಚಿವರು ಸಿಎಂ ಗೃಹ ಕಚೇರಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದರು. ಕೆಲವು ಸಲ ಸಿಎಂ ಸುದ್ದಿಗೋಷ್ಠಿ ನಡೆಸಿ ಸಭೆಗಳಲ್ಲಿ ಚರ್ಚೆಯಾದ ವಿಷಯ, ಕೈಗೊಂಡ ನಿರ್ಧಾರಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಆದರೆ, ಈಗ ಈ ಎಲ್ಲಾ ಕಾರ್ಯಕ್ರಮಗಳ ವಿಡಿಯೋ ಹಾಗೂ ಫೋಟೋಗಳನ್ನು ಸಿಎಂ ಕಚೇರಿಯಿಂದಲೇ ಬಿಡುಗಡೆ ಮಾಡಲಾಗ್ತಿದೆ. ಯಾವ ಕಾರ್ಯಕ್ರಮಕ್ಕೂ ಮಾಧ್ಯಮಗಳನ್ನು ಆಹ್ವಾನಿಸಿಲ್ಲ. ಪತ್ರಕರ್ತರೊಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಪ್ರಾಥಮಿಕ ಸಂಪರ್ಕಿತ 37 ಪತ್ರಕರ್ತರು ಹೋಟೆಲ್ ಕ್ವಾರಂಟೈನ್ಗೆ ಹಾಗೂ ಡಿಸಿಎಂ ಸೇರಿ ಐವರು ಸಚಿವರು ಹೋಂ ಕ್ವಾರಂಟೈನ್ ಗೆ ಒಳಪಟ್ಟಿರುವ ಹಿನ್ನಲೆಯಲ್ಲಿ ಕೃಷ್ಣಾ ಹಾಗೂ ಕಾವೇರಿಗೆ ಸಧ್ಯದ ಮಟ್ಟಿಗೆ ಮಾಧ್ಯಮಗಳನ್ನು ಆಹ್ವಾನಿಸವುದು ಬೇಡ ಎನ್ನುವ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.