ಬೆಂಗಳೂರು: ಪಕ್ಷದಲ್ಲಿ ಉದ್ಬವಿಸಿದ್ದ ಅಸಮಾಧಾನ ಪರಿಹಾರಗೊಂಡಿದ್ದು, ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸುತ್ತೇನೆ ಎಂದು ಅನರ್ಹ ಶಾಸಕ ಗೋಪಾಲಯ್ಯ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರಂನ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹಿ ಮಾಡಿದ್ದ ಬಿ ಫಾರಂ ಅನ್ನು ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ರಿಂದ ಪಡೆದುಕೊಂಡರು.
ಗೋಪಾಲಯ್ಯ ಮಾತನಾಡಿ, ಇವತ್ತು ಬಿ ಫಾರಂ ತೆಗೆದುಕೊಂಡಿದ್ದೇನೆ. ಸೋಮವಾರ ನಾಮಪತ್ರ ಸಲ್ಲಿಸುತ್ತಿದ್ದೇನೆ. ಸಿಎಂ ಬಿಎಸ್ವೈ, ಸದಾನಂದ ಗೌಡ ಸೇರಿದಂತೆ ಅನೇಕ ನಾಯಕರು ಪ್ರಚಾರಕ್ಕೆ ಬರಲಿದ್ದಾರೆ. ಕ್ಷೇತ್ರದಲ್ಲಿ ಸದ್ಯ ಯಾವುದೇ ಅಸಮಾಧಾನವಿಲ್ಲ ಎಂದರು.
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ದೊಡ್ಡವರು ಅವರಿಗೆ ನಾನು ಉತ್ತರ ಕೊಡುವಷ್ಟು ಮಟ್ಟಿಗೆ ರಾಜಕಾರಣದಲ್ಲಿ ಬೆಳೆದಿಲ್ಲ. ಕ್ಷೇತ್ರದಲ್ಲಿ ಎರಡೂವರೆ ಲಕ್ಷ ಜನ ಮತದಾರರಿದ್ದಾರೆ. ಅವರು ನನ್ನ ಭವಿಷ್ಯ ನಿರ್ಧಾರ ಮಾಡುತ್ತಾರೆ ಎಂದು ಹೆಚ್ಡಿಕೆಗೆ ಟಾಂಗ್ ನೀಡಿದರು.
ಅಸಮಾಧಾನ ವ್ಯಕ್ತಪಡಿಸಿದ ಗೋಪಾಲಯ್ಯ:
ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಕಾರ್ಯಕರ್ತರು ಇನ್ನೂ ಕೂಡ ಬಹಿರಂಗವಾಗಿ ಪ್ರತಿಭಟನೆ ಮಾಡುತ್ತಿರುವುದಕ್ಕೆ ಅರುಣ್ ಕುಮಾರ್ ಎದುರು ಗೋಪಾಲಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಬಿ ಫಾರಂ ಪಡೆಯುವ ವೇಳೆ ಈ ವಿಷಯ ಪ್ರಸ್ತಾಪಿಸಿ ಇಷ್ಟು ದಿನವಾದರೂ ನನ್ನ ವಿರುದ್ಧದ ಅಸಮಾಧಾನ ತಿಳಿಯಾಗಿಲ್ಲ ಎಂದು ಬೇಸರ ಅವರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.