ಬೆಂಗಳೂರು: ರಾಜ್ಯದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ, ಈ ವಿಚಾರವು ಕೇವಲ ಗಾಳಿಸುದ್ದಿಯಾಗಿದ್ದು, ಅದು ಶುದ್ಧ ಸುಳ್ಳು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿರುವ ಸಚಿವರು, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸದಂತೆ ನಿರ್ಬಂಧಿಸಲಾಗುವುದು ಎಂದು ಕೆಲವರು ಗಾಳಿಸುದ್ದಿ ಹಬ್ಬಿಸುತ್ತಿದ್ದಾರೆ. ಬೋಧನಾ ವ್ಯವಸ್ಥೆಯು ಆನ್ಲೈನ್ ರೂಪ ಪಡೆದಿರುವುದರಿಂದ ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್ ಮುಂತಾದ ಆಧುನಿಕ ತಾಂತ್ರಿಕ ಸಾಧನಗಳು ವಿದ್ಯಾರ್ಥಿಗಳ ಕಲಿಕೆಯ ಅವಿಭಾಜ್ಯ ಅಂಗವೇ ಆಗಿಹೋಗಿವೆ. ಹೀಗಿರುವುದಾಗ ನಿಷೇಧದ ಮಾತು ಎಲ್ಲಿಂದ ಬರುತ್ತೆ ಎಂದಿದ್ದಾರೆ.
ಇಂತಹ ಗಾಳಿ ಮಾತುಗಳನ್ನು ವಿದ್ಯಾರ್ಥಿಗಳಾಗಲಿ, ಪೋಷಕರಾಗಲಿ ನಂಬಬಾರದು. ಆಧುನಿಕ ಸಾಧನಗಳನ್ನು ಬಳಸಿಕೊಂಡು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ಮತ್ತು ಶಿಕ್ಷಣ ಪೂರೈಸುವುದು ಸರ್ಕಾರದ ಆದ್ಯತೆಯಾಗಿದೆ. ಕಾಲೇಜುಗಳಲ್ಲಿ ಮೊಬೈಲ್ ಬಳಕೆ ಎಂದಿನಂತೆ ಮುಂದುವರೆಯಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಪದವಿ, ವಿವಿ, ಡಿಪ್ಲೋಮಾ ಕಾಲೇಜುಗಳಿಗೆ ಫೆ.16ರವರೆಗೆ ರಜೆ ಘೋಷಿಸಿದ ಸರ್ಕಾರ