ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಸಂಪೂರ್ಣ ತನಿಖೆ ನಡೆಯಲಿದ್ದು, ಪ್ರಾಥಮಿಕ ತನಿಖಾ ವರದಿ ಬಂದ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ಪ್ರಾಥಮಿಕ ಹಂತದ ವರದಿ ಬರುವವರೆಗೂ ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಪ್ರಾಥಮಿಕ ವರದಿ ಬರುವವರೆಗೂ ಈಶ್ವರಪ್ಪರಿಂದ ರಾಜೀನಾಮೆ ಪಡೆಯಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.
ಆರ್.ಟಿ ನಗರದಲ್ಲಿರುವ ಖಾಸಗಿ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಬಂಧನಕ್ಕೆ ಕಾಂಗ್ರೆಸ್ ಹೋರಾಟ ನಡೆಸುತ್ತಿದೆ. ಆದರೆ ಕಾಂಗ್ರೆಸ್ನವರು ಅಧಿಕಾರದಲ್ಲಿದ್ದಾಗ ಹಲವು ಕೊಲೆಗಳಾದವು. ಕೊಲೆ ಮಾಡಿದವರ ವಿರುದ್ಧದ ಪ್ರಕರಣಗಳನ್ನು ಪಾಪಸ್ ಪಡೆದಿದ್ದರು, ಇದರಿಂದ ಆಗ ಅರಾಜಕತೆ ಉಂಟಾಗಿತ್ತು. ಹಾಗಾಗಿ ಜನ ಚುನಾವಣೆಯಲ್ಲಿ ಅವರನ್ನು ತಿರಸ್ಕರಿಸಿದ್ದರು. ಕಾಂಗ್ರೆಸ್ನವರಿಗೆ ಪ್ರತಿಭಟನೆ ನಡೆಸುವ ಯಾವುದೇ ನೈತಿಕ ಹಕ್ಕಿಲ್ಲ. ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಸಂತೋಷ್ ಆತ್ಮಹತ್ಯೆ ಪ್ರಕರಣದ ಸಂಪೂರ್ಣ ತನಿಖೆ ಆಗುತ್ತದೆ, ಸತ್ಯ ಹೊರಬರುತ್ತದೆ ಎಂದು ಹೇಳಿದರು.
ಅಧಾರವಿದ್ದರೆ ತನಿಖೆಗೆ ಸಿದ್ಧ: ಸಿದ್ದರಾಮಯ್ಯ ನಮ್ಮ ಮೇಲೂ ಆಧಾರ ರಹಿತ ಆರೋಪ ಮಾಡಿದ್ದಾರೆ. ಸಿಎಂ ಕಚೇರಿಯಲ್ಲಿ ಲಂಚ ಪಡೆಯುತ್ತಾರೆ ಎಂದಿರುವ ಅವರ ಅಧಾರ ರಹಿತ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಏನು ಅಧಾರವಿದೆಯೋ ತಂದು ಕೊಡಲಿ, ಆಗ ತನಿಖೆ ನಡೆಸಲಾಗುವುದು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಹಲವಾರು ಲಂಚದ ಆರೋಪ ಕೇಳಿಬಂದಿದ್ದವು. ಬಿಡಿಎದಲ್ಲಿ ದೊಡ್ಡ ಹಗರಣದ ಆರೋಪವಿತ್ತು. ಹೀಗಾಗಿ ಈಗ ಅವರಿಗೆ ಪ್ರಶ್ನಿಸುವ ಯಾವ ಹಕ್ಕಿದೆ? ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಲೋಕೋಪಯೋಗಿ, ಆರೋಗ್ಯ ಇಲಾಖೆ ಯಾವುದೇ ಕಮಿಷನ್ ಆರೋಪ ಇದ್ದರೂ ಹೇಳಲಿ, ತನಿಖೆ ಮಾಡಿಸಲಾಗುವುದು. ಗುತ್ತಿಗೆದಾರರ ಬಳಿ ದಾಖಲೆ ಇದ್ದರೆ ನೀಡಲು ಹೇಳಿ, ನಾವು ತನಿಖೆ ಮಾಡಿಸುತ್ತೇವೆ ಎಂದು ಸಿಎಂ ತಿರುಗೇಟು ನೀಡಿದರು.
ಹೈಕಮಾಂಡ್ ಮಧ್ಯಪ್ರವೇಶವಿಲ್ಲ: ಸದ್ಯ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಪ್ರಾಥಮಿಕ ತನಿಖೆ ಆಗುತ್ತಿದೆ. ಅದರ ಆಧಾರದ ಮೇಲೆ ಮುಂದಿನ ತನಿಖೆ ಬಗ್ಗೆ ನಿರ್ಣಯ ಮಾಡುತ್ತೇವೆ. ಈಶ್ವರಪ್ಪ ವಿಷಯದಲ್ಲಿ ಹೈಕಮಾಂಡ್ನ ಮಧ್ಯಪ್ರವೇಶ ಏನು ಇಲ್ಲ. ಅವರು ಕೇವಲ ಮಾಹಿತಿ ಪಡೆದಿದ್ದಾರೆ. ಆದರೆ ಇದರಲ್ಲಿ ಅವರ ಪಾತ್ರವೇನಿಲ್ಲ ಎಂದ ಸಿಎಂ, ಈಶ್ವರಪ್ಪ ರಾಜೀನಾಮೆ ಪಡೆಯುವ ವಿಚಾರ ಕುರಿತು ಪ್ರಾಥಮಿಕ ತನಿಖೆ ಆಗುವವರೆಗೂ ಯಾವುದೇ ರೀತಿಯ ಕ್ರಮ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಪ್ರತಿಭಟನೆ ನಡುವೆಯೇ ಗುತ್ತಿಗೆದಾರ ಸಂತೋಷ್ ಪಾಟೀಲ್ ಅಂತ್ಯಕ್ರಿಯೆ