ಬೆಂಗಳೂರು: ಕೊರೊನಾ ಸೋಂಕು ಹೆಚ್ಚಿರುವ ರಾಜ್ಯದ ಎಂಟು ನಗರಗಳಲ್ಲಿ ನಾಳೆಯಿಂದ ಜಾರಿಯಾಗಲಿರುವ ನೈಟ್ ಕರ್ಫ್ಯೂಗೆ ಇಂದು ಸಂಜೆ ನೂತನ ಮಾರ್ಗಸೂಚಿ ಪ್ರಕಟಗೊಳ್ಳಲಿದೆ.
ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ. ರವಿಕುಮಾರ್ ಕೊರೊನಾ ಕರ್ಫ್ಯೂ ಜಾರಿ ಸಂಬಂಧ ಇಂದು ಸಂಜೆ ನೂತನ ಮಾರ್ಗಸೂಚಿ ಬಿಡುಗಡೆಗೊಳಿಸಲಿದ್ದಾರೆ. ನೂತನ ಮಾರ್ಗ ಸೂಚಿ ಪ್ರಕಾರ ಪೊಲೀಸ್ ಇಲಾಖೆ ಅಗತ್ಯ ಬಂದೋಬಸ್ತ್ ಕಲ್ಪಿಸಲಿದೆ. ನೂತನ ಮಾರ್ಗಸೂಚಿ ಅನ್ವಯ ಪೊಲೀಸ್ ಇಲಾಖೆ ಕ್ರಮಗಳನ್ನ ಕೈಗೊಳ್ಳಲಿದೆ.
ಬೆಂಗಳೂರು ನಗರದಲ್ಲಿ ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೂ ವರೆಗೂ ಸೆಕ್ಷನ್ 144 ಜಾರಿಗೊಳಿಸುವ ಸಾಧ್ಯತೆ ಇದ್ದು, ಬೆಂಗಳೂರು ಹೊರತುಪಡಿಸಿ ಬೇರೆ ಬೇರೆ ನಗರಗಳಲ್ಲಿ ಆಯಾ ಜಿಲ್ಲಾಧಿಕಾರಿಗಳು, ಆಯಾ ಪೊಲೀಸ್ ಕಮಿಷನರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮ ತೆಗೆದುಕೊಳ್ಳಲಿದ್ದಾರೆ.
ಇಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಗೃಹ ಇಲಾಖೆ ಕಾರ್ಯದರ್ಶಿ ರಜನೀಶ್ ಗೋಯೆಲ್, ಹಿರಿಯ ಐಪಿಎಸ್ ಅಧಿಕಾರಿ ಮಾಲಿನಿ ಕೃಷ್ಣಮೂರ್ತಿ ಜೊತೆ ಸಭೆ ನಡೆಸಿದ ಸಿಎಂ ಯಡಿಯೂರಪ್ಪ, ಹೊಸ ಮಾರ್ಗಸೂಚಿ ಅನ್ವಯದಂತೆ ಕಾನೂನು ಸುವ್ಯವಸ್ಥೆ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ಸಭೆ: ನೈಟ್ ಕರ್ಫ್ಯೂ ಸನ್ನದ್ಧತೆಗೆ ಸೂಚನೆ
ಸಿಎಂ ಸೂಚನೆಯಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಬೆಂಗಳೂರು ನಗರ, ಮೈಸೂರು ನಗರ, ಮಂಗಳೂರು ನಗರ, ಕಲಬುರಗಿ ನಗರ, ಬೀದರ್ ನಗರ , ತುಮಕೂರು ನಗರ, ಉಡುಪಿ ನಗರ ಮತ್ತು ಮಣಿಪಾಲ್ ನಲ್ಲಿ ನೈಟ್ ಕರ್ಫ್ಯೂ ಜಾರಿಗೆ ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಸಂದೇಶ ರವಾನಿಸಿದ್ದಾರೆ.