ಬೆಂಗಳೂರು: ಸಿಸಿಬಿ ಪೊಲೀಸರು ಕಾರ್ಯಾಚರಣೆ ಮಾಡಿ ಕೊಕೇನ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯೊಬ್ಬನನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜಿಕ್ವಾ ಮಿಚೆಲ್ ಬಂಧಿತ ನೈಜೀರಿಯಾ ಪ್ರಜೆ.
ಈತ ಸಿಲಿಕಾನ್ ಸಿಟಿಯಲ್ಲಿ ವೀಸಾ ಅವಧಿ ಮುಗಿದಿದ್ರೂ ಅಕ್ರಮವಾಗಿ ನೆಲೆಸಿ ಇಲ್ಲಿರುವ ವಿದ್ಯಾರ್ಥಿಗಳಿಗೆ, ಟೆಕ್ಕಿಗಳಿಗೆ, ಯುವಕರಿಗೆ ಕೊಕೇನ್ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಹೆಚ್ಚುವರಿ ಆಯುಕ್ತ ಜಿಕ್ವಾ ಮಿಚೆಲ್ ಎಂಬಾತನ ಮನೆ ಮೇಲೆ ದಾಳಿ ನಡೆಸಿ 5 ಲಕ್ಷ ಮೌಲ್ಯದ 50 ಗ್ರಾಂ ಕೊಕೇನ್ ವಶಪಡಿಸಿಕೊಂಡು NDPS ಕಾಯ್ದೆ ಅಡಿಯಲ್ಲಿ ಜಿಕ್ವಾ ಮಿಚೆಲ್ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ.
ಇನ್ನು, ಈತನ ಜೊತೆ ಇನ್ನೂ ಹಲವಾರು ಮಂದಿ ಭಾಗಿಯಾಗಿರುವ ಶಂಕೆ ಇದ್ದು, ಬಂಧಿತನನ್ನು ಹೆಚ್ವಿನ ವಿಚಾರಣೆಗೊಳಪಡಿಸಲಾಗಿದೆ.