ಬೆಂಗಳೂರು: ಕಳೆದ ಮಧ್ಯರಾತ್ರಿಯಿಂದ ದಿಢೀರ್ ಕಾರ್ಯಾಚರಣೆ ಕೈಗೊಂಡಿರುವ 200ಕ್ಕೂ ಹೆಚ್ಚು ರಾಷ್ಟ್ರೀಯ ತನಿಖಾ ದಳದ(ಎನ್‌ಐಎ) ಅಧಿಕಾರಿಗಳು ದೇಶದೆಲ್ಲೆಡೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಾರ್ಯಕರ್ತರ ಕಚೇರಿಗಳು ಮತ್ತು ನಿವಾಸಗಳ ಮೇಲೆ ದಾಳಿ ನಡೆಸುತ್ತಿದ್ದಾರೆ.
ಬೆಂಗಳೂರಿನ ರಿಚ್‌ಮಂಡ್ ಟೌನ್, ಪಾದರಾಯನಪುರದಲ್ಲಿ ದಾಳಿ: ಭಯೋತ್ಪಾದಕ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವ ಗಂಭೀರ ಆರೋಪಗಳ ಮೇರೆಗೆ ಮಂಗಳೂರು, ಬೆಂಗಳೂರು ಸೇರಿದಂತೆ ಪಿಎಫ್‌ಐನ ಎಂಟು ನಾಯಕರ ನಿವಾಸ ಹಾಗೂ ಕಚೇರಿಗಳಲ್ಲಿ ಪರಿಶೀಲನೆ ನಡೆಯುತ್ತಿದೆ. ಬೆಂಗಳೂರಿನ ರಿಚ್‌ಮಂಡ್ ರಸ್ತೆಯಲ್ಲಿ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಾಗಿರುವ ಪಿಎಫ್ಐ ರಾಷ್ಟ್ರೀಯ ಕಾರ್ಯದರ್ಶಿ ಮೊಹಮ್ಮದ್ ಸಾಕಿಬ್, ಪಾದರಾಯನಪುರದಲ್ಲಿ ವಾಸವಾಗಿರುವ ಪಿಎಫ್ಐ ರಾಜ್ಯ ಘಟಕದ ಅಧ್ಯಕ್ಷ ನಾಸೀರ್ ಪಾಷಾ, ಪುಲಕೇಶಿನಗರ, ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ವಾಸವಾಗಿರುವ ಸಂಘಟನೆಯ ಇತರೆ ಸದಸ್ಯರ ಮನೆಗಳ ಮೇಲೆ ದಾಳಿ ಮಾಡಿರುವ ಎನ್ಐಎ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.
ಪಿಎಫ್‌ಐಗೆ ವಿದೇಶಗಳಿಂದ ಕೋಟ್ಯಂತರ ರೂ ಫಂಡಿಂಗ್?: ಈ ಹಿಂದೆ ಪಿಎಫ್ಐ ಕಚೇರಿಗಳ ಮೇಲೆ ದೇಶದೆಲ್ಲೆಡೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದರು. ತನಿಖೆಯ ಸಂದರ್ಭದಲ್ಲಿ ಕೋಟ್ಯಂತರ ರೂ ಹಣಕಾಸು ವ್ಯವಹಾರ ಪತ್ತೆಯಾಗಿತ್ತು. ವಿದೇಶದಿಂದ ಹಣ ಬರುತ್ತಿರುವ ಬಗ್ಗೆಯೂ ತನಿಖಾಧಿಕಾರಿಗಳು ಮಾಹಿತಿ ಖಚಿತಪಡಿಸಿಕೊಂಡಿದ್ದರು. ಇದೇ ಹಣದಿಂದಲೇ ಪಿಎಫ್ಐ ದೇಶದೆಲ್ಲೆಡೆ ನಡೆಸುತ್ತಿರುವ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿತ್ತು. ಇದೀಗ ವಿವಿಧ ದೇಶಗಳಿಂದ ಸಂಘಟನೆಗೆ ಹರಿದು ಬರುತ್ತಿರುವ ಅಪಾರ ಪ್ರಮಾಣದ ದೇಣಿಗೆ ವಿಚಾರವಾಗಿ ದಾಳಿ ಮಾಡಲಾಗಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.
ದೇಶದಲ್ಲಿ ಅಕ್ರಮ ಕೃತ್ಯಗಳಿಗೆ ಕುಮ್ಮಕ್ಕು- ಗಂಭೀರ ಆರೋಪ: ಭಯೋತ್ಪಾದನೆಗೆ ಧನಸಹಾಯ, ಅಕ್ರಮ ಶಸ್ತ್ರಾಸ್ತ್ರ ತರಬೇತಿ ಶಿಬಿರಗಳ ಆಯೋಜನೆ ಮತ್ತು ಸಂಘಟನೆಯನ್ನು ಸೇರಲು ಜನರಿಗೆ ಪ್ರಚೋದನೆ ನೀಡುತ್ತಿರುವ ಗಂಭೀರ ಆರೋಪದ ಮಾಹಿತಿ ಲಭ್ಯವಾಗಿರುವ ಬೆನ್ನಲ್ಲೇ ಈ ಬೃಹತ್ ಕಾರ್ಯಾಚರಣೆ ನಡೆಯುತ್ತಿದೆ.
ಪಿಎಫ್ಐ ಬೆಂಬಲಿಗರ ಪ್ರತಿಭಟನೆ: ಎನ್ಐಎ ದಾಳಿ ಬೆನ್ನಲ್ಲೇ ಪುಲಕೇಶಿನಗರದಲ್ಲಿರುವ ಪಿಎಫ್ಐ ಕಚೇರಿ ಮುಂದೆ ಕಾರ್ಯಕರ್ತರು ಹಾಗೂ ಬೆಂಬಲಿಗರು ಪ್ರತಿಭಟಿಸಿದ್ದಾರೆ. ‘ಗೋ ಬ್ಯಾಕ್ ಎನ್ಐಎ’ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದೇಶಾದ್ಯಂತ ಮಧ್ಯರಾತ್ರಿಯಿಂದಲೇ PFI ಕಚೇರಿಗಳ ಮೇಲೆ ಎನ್ಐಎ, ಇಡಿ ದಿಢೀರ್ ದಾಳಿ